ADVERTISEMENT

ಕ್ಯಾಬ್ ಹತ್ತೋದು,ಸುತ್ತಾಡೋದು..ಹಣ ನೀಡದೆ ಚಾಲಕರ ಜತೆ ಕಿರಿಕ್ ಮಾಡೋದೇ ಈಕೆ ಕೆಲ್ಸ!

ಪಿಟಿಐ
Published 7 ಜನವರಿ 2026, 16:01 IST
Last Updated 7 ಜನವರಿ 2026, 16:01 IST
ಕ್ಯಾಬ್‌ (ಪ್ರಾತಿನಿಧಿಕ ಚಿತ್ರ)
ಕ್ಯಾಬ್‌ (ಪ್ರಾತಿನಿಧಿಕ ಚಿತ್ರ)   

ಗುರುಗ್ರಾಮ: ಸಿಕ್ಕ ಸಿಕ್ಕ ಕ್ಯಾಬ್ ಹತ್ತೋದು.. ಬೇಕಾದ ಕಡೆಯೆಲ್ಲಾ ಗಂಟೆಗಟ್ಟಲೆ ಸುತ್ತಾಡೋದು... ಚಾಲಕರಿಂದಲೇ ತುಂಡು, ಗುಂಡಿಗೆ ಖರ್ಚು ಮಾಡಿಸುವ ಮಹಿಳೆಯೊಬ್ಬರು, ಹಣ ಕೇಳಿದ್ದಕ್ಕೆ ಲೈಂಗಿಕ ಕಿರುಕುಳದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ಹರಿಯಾಣ ಗುರುಗ್ರಾಮದಲ್ಲಿ ನಡೆದಿದೆ.

ಜ್ಯೋತಿ ದಲಾಲ್ ಎಂಬುವವರು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಜಿಯಾವುದ್ದೀನ್ ಅವರ ಕ್ಯಾಬ್‌ ಹತ್ತಿದ್ದರು. ಆರಂಭದಲ್ಲಿ ಸೆಕ್ಟರ್ 31, ಬಸ್ ನಿಲ್ದಾಣ ಬಳಿಕ ಸೈಬರ್ ಸಿಟಿಗೆ ಕರೆದೊಯ್ಯಲು ಹೇಳಿದ್ದರು. ಅದರಂತೆ ಜಿಯಾವುದ್ದೀನ್, ಜ್ಯೋತಿಯನ್ನು ಕರೆದುಕೊಂಡು ಹೋಗಿದ್ದ.

‘ಪ್ರಯಾಣ ಪೂರ್ಣಗೊಂಡ ಬಳಿಕ ಹಣ ಪಾವತಿಸುವುದಾಗಿ ಹೇಳಿದ್ದ ಜ್ಯೋತಿ, ನನ್ನ ಬಳಿ ₹700 ಹಣ ಪಡೆದಿದ್ದರು. ಆಕೆ ಹೇಳಿದ ಕಡೆಗೆಲ್ಲಾ ಕರೆದುಕೊಂಡು ಹೋಗಿದ್ದೆ. ಬಳಿಕ ಹೋಟೆಲ್‌ನಲ್ಲಿ ಊಟ, ಮದ್ಯಪಾನ... ಹೀಗೆ ಎಲ್ಲಾ ಖರ್ಚನ್ನು ನಾನೇ ನೋಡಿಕೊಂಡಿದ್ದೆ. ಮಧ್ಯಾಹ್ನದ ವೇಳೆಗೆ ಕಾರಿನಿಂದ ಇಳಿದು ನನ್ನ ಹಣ ಕೊಡುವಂತೆ ಮನವಿ ಮಾಡಿದ್ದೆ. ಆಗ ಆಕೆ ನನ್ನ ಮೇಲೆ ಕೋಪಗೊಂಡು ಕಿರುಚಾಡಿದ್ದರು’ ಎಂದು ನುಹ್ ಜಿಲ್ಲೆಯ ಧಾನಾ ಗ್ರಾಮದ ನಿವಾಸಿ ಜಿಯಾವುದ್ದೀನ್ ವಿವರಿಸಿದ್ದಾರೆ.

ADVERTISEMENT

ಜ್ಯೋತಿ ಅವರು ನನ್ನ ಮೇಲೆ ಕಳ್ಳತನ ಅಥವಾ ಲೈಂಗಿಕ ಕಿರುಕುಳದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿ, ಗಲಾಟೆ ಮಾಡಿದ್ದರು ಎಂದು ಜಿಯಾವುದ್ದೀನ್ ಅಳಲು ತೊಡಿಕೊಂಡಿದ್ದಾರೆ.

ಜ್ಯೋತಿ ಅವರು ಕ್ಯಾಬ್ ಚಾಲಕನಿಗೆ ₹2,000 ಮತ್ತು ಸಲೂನ್‌ವೊಂದರಲ್ಲಿ ₹20,000 ಹಣ ನೀಡದೆ ವಂಚಿಸಿದ್ದಾರೆ. ಆಕೆಯ ವಿರುದ್ಧ ವಂಚನೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆಕೆ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಸೆಕ್ಟರ್ 29 ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರವಿ ಕುಮಾರ್ ಹೇಳಿದ್ದಾರೆ.

ಜ್ಯೋತಿ ಅವರು 2024ರ ಫೆಬ್ರುವರಿಯಲ್ಲಿ ಪ್ರಯಾಣ ದರ ಸೇರಿದಂತೆ ವಿವಿಧ ವಿಚಾರಗಳಿಗಾಗಿ ಕ್ಯಾಬ್ ಚಾಲಕನೊಂದಿಗೆ ವಾಗ್ವಾದ ನಡೆಸುತ್ತಿದ್ದ ವಿಡಿಯೊ ವ್ಯಾಪಕವಾಗಿ ಹರಿದಾಡಿತ್ತು. ತನಿಖೆ ವೇಳೆ ಜ್ಯೋತಿ ಹಲವರಿಗೆ ಇದೇ ರೀತಿ ವಂಚಿಸಿರುವುದು ತಿಳಿದುಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.