ADVERTISEMENT

ಅಂಗವಿಕಲ ಬಾಲಕನಿಗೆ ವಿಮಾನದಲ್ಲಿ ಪ್ರವೇಶ ನಿರಾಕರಣೆ: ಇಂಡಿಗೊ ವಿರುದ್ಧ ತನಿಖೆ

​ಪ್ರಜಾವಾಣಿ ವಾರ್ತೆ
Published 10 ಮೇ 2022, 1:40 IST
Last Updated 10 ಮೇ 2022, 1:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಅಂಗವಿಕಲ ಬಾಲಕನಿಗೆ ‘ಇಂಡಿಗೊ’ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ್ದ ಪ್ರಕರಣದ ವಿಚಾರಣೆ ನಡೆಸುತ್ತಿರುವುದಾಗಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಇಂತಹ ವರ್ತನೆ ಸಹಿಸಲಾಗದು. ಯಾರಿಗೂ ಈ ಪರಿಸ್ಥಿತಿ ಎದುರಾಗಬಾರದು. ತನಿಖೆ‌ಯನ್ನು ಖುದ್ದು ಪರಿಶೀಲಿಸುತ್ತಿದ್ದು, ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದ್ದಾರೆ.

ಶನಿವಾರ ರಾಂಚಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು.ಬಾಲಕನಿಗೆ ವಿಮಾನ ಪ್ರಯಾಣ ನಿರಾಕರಿಸಿದ ಘಟನೆಯ ವಿಡಿಯೊ ಅನ್ನು ಸಹ ಪ್ರಯಾಣಿಕಮನಿಶಾ ಗುಪ್ತಾ ‘ಲಿಂಕ್ಡ್ ಇನ್‌’ ಜಾಲತಾಣದಲ್ಲಿ ಭಾನುವಾರ ಹಂಚಿಕೊಂಡಿದ್ದರು.

ADVERTISEMENT

ಇಂಡಿಗೊ ವಿಮಾನ ಸಿಬ್ಬಂದಿ ಬಾಲಕನಿಗೆ ಪ್ರವೇಶ ನಿರಾಕರಿಸಿದ್ದರಿಂದ ಆತನ ತಂದೆ–ತಾಯಿ ಸಹ ಹೈದರಾಬಾದ್‌ಗೆ ಆ ವಿಮಾನದಲ್ಲಿ ಪ್ರಯಾಣಿಸುವುದನ್ನು ಕೈಬಿಡಬೇಕಾಯಿತು.

‘ವಿಮಾನ ಪ್ರವೇಶಿಸುವಾಗ ಬಾಲಕ ಹೆಚ್ಚು ದಿಗಿಲುಗೊಂಡಿದ್ದರಿಂದ ಸಹ ಪ್ರಯಾಣಿಕರಿಗೆ ತೊಂದರೆ ಆಗಬಹುದೆಂದು ಬಾಲಕನಿಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿಲ್ಲ’ ಎಂದು ಸಿಬ್ಬಂದಿ ಪ್ರಕಟಿಸಿದ್ದರು.

ಆದರೆ, ಇದನ್ನು ಸಹ ಪ್ರಯಾಣಿಕರು ವಿರೋಧಿಸಿ, ಬಾಲಕ ಹಾಗೂ ಆತನ ಪೋಷಕರಿಗೆ ವಿಮಾನದಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು.

ತನಿಖೆಗೆ ತ್ರಿಸದಸ್ಯ ತಂಡ ರಚನೆ: ಪ್ರಕರಣದ ಸತ್ಯಾಸತ್ಯೆಯ ಕುರಿತು ತನಿಖೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಡಿಜಿಸಿಎ ಸೋಮವಾರ ತ್ರಿಸದಸ್ಯರ ತಂಡ ರಚಿಸಿದೆ.

ಡಿಜಿಸಿಎ ಮುಖ್ಯಸ್ಥ ಅರುಣ್‌ ಕುಮಾರ್‌, ಈ ಘಟನೆಗೆ ಸಂಬಂಧಿಸಿ ವರದಿ ಸಲ್ಲಿಸುವಂತೆಇಂಡಿಗೊ ಸಂಸ್ಥೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

‘ತಂಡವು ರಾಂಚಿ ಮತ್ತು ಹೈದರಾಬಾದ್‌ಗೆ ತೆರಳಿ ವಾರದೊಳಗೆ ಸಾಕ್ಷ್ಯ ಸಂಗ್ರಹಿಸಲಿದೆ. ಬಳಿಕ ಮಂದಿನ ಕ್ರಮ ಕೈಗೊಳ್ಳಲಾಗುವುದು’ಎಂದೂ ಹೇಳಿದ್ದಾರೆ.

ವಿಷಾದ:ಬಾಲಕನಿಗೆ ವಿಮಾನ ಪ್ರಯಾಣ ನಿರಾಕರಿಸಿರುವುದಕ್ಕೆ ಇಂಡಿಗೊ ವಿಮಾನ ಸಂಸ್ಥೆಯ ಸಿಇಒ ರಣಜಾಯ್‌ ದತ್ತಾ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ‘ಕಠಿಣ ಪರಿಸ್ಥಿತಿಯಲ್ಲಿ ಸಿಬ್ಬಂದಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ದತ್ತಾ ಹೇಳಿದ್ದಾರೆ.

‘ಬಾಲಕನ ಆರೈಕೆ ಕುರಿತು ಪೋಷಕರ ಬದ್ಧತೆ ಶ್ಲಾಘನೀಯ. ಬಾಲಕನಿಗೆ ವಿದ್ಯುತ್ ಚಾಲಿತ ವ್ಹೀಲ್ ಚೇರ್‌ ಕೊಡುಗೆ ನೀಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಎಫ್‌ಐಆರ್‌ ದಾಖಲಿಸಲು ಸೂಚನೆ: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ರಾಷ್ಟ್ರೀಯ ಆಯೋಗದ (ಎನ್‌ಸಿಪಿಸಿಆರ್‌)
ಅಧ್ಯಕ್ಷ ಪ್ರಿಯಾಂಕ್ ಕನೂಂಗೊ, ಇದುಅಂಗವಿಕಲರ ಹಕ್ಕುಗಳ ಕಾಯ್ದೆಯ ಸೆಕ್ಷನ್ 7ರ ಪ್ರಾಥಮಿಕ ಉಲ್ಲಂಘನೆ. ಇಂಡಿಗೊ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜಾರ್ಖಂಡ್ ಪೊಲೀಸರಿಗೆ ಸೂಚಿಸಿದ್ದಾರೆ.

ಡಿಜಿಸಿಎ ಈ ಬಗ್ಗೆ ತನಿಖೆ ನಡೆಸಿ, ಇಂಡಿಗೊ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.