ADVERTISEMENT

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಚಿವ ಸ್ಥಾನಕ್ಕೆ ಹರ್‌ಸಿಮ್ರತ್‌ ಕೌರ್ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 15:36 IST
Last Updated 17 ಸೆಪ್ಟೆಂಬರ್ 2020, 15:36 IST
ಸಮಾರಂಭವೊಂದರಲ್ಲಿ ಹರ್‌ಸಿಮ್ರತ್‌ ಕೌರ್‌ ಮತ್ತು ನರೇಂದ್ರ ಮೋದಿ
ಸಮಾರಂಭವೊಂದರಲ್ಲಿ ಹರ್‌ಸಿಮ್ರತ್‌ ಕೌರ್‌ ಮತ್ತು ನರೇಂದ್ರ ಮೋದಿ    

ದೆಹಲಿ: ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಚಿವೆ ಹರ್‌ಸಿಮ್ರತ್‌ ಕೌರ್ ಬಾದಲ್ ಗುರುವಾರ ಮೋದಿ ಸಂಪುಟ ತ್ಯಜಿಸಿದ್ದಾರೆ.

ಕೇಂದ್ರದ ರೈತ ವಿರೋಧಿ ಕ್ರಮವನ್ನು ವಿರೋಧಿಸಿ ಸಚಿವೆ ಹರ್‌ಸಿಮ್ರತ್‌ ಕೌರ್‌ ಸಂಪುಟವನ್ನು ತೊರೆಯುವುದಾಗಿ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಲೋಕಸಭೆಯಲ್ಲಿ ಘೋಷಿಸಿದ ಬೆನ್ನಲ್ಲೇ ಹರ್‌ಸಿಮ್ರತ್‌ ಕೌರ್‌ ತಮ್ಮ ರಾಜೀನಾಮೆಯನ್ನು ಮೋದಿ ಅವರಿಗೆ ಸಲ್ಲಿಸಿದ್ದಾರೆ.

ಪಕ್ಷದ ವಕ್ತಾರ ಹರ್‌ಚರಣ್‌ ಬೈನ್ಸ್‌ ಅವರು ಈ ವಿಚಾರವನ್ನೂ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರವು ಸಂಸತ್ತಿನಲ್ಲಿ ಮಂಡಿಸಿದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಅವರು ಕೇಂದ್ರ ಸಚಿವ ಸಂಪುಟದಿಂದ ಹೊರಬಂದಿದ್ದಾರೆ ಎಂದು ಹರ್‌ಚರಣ್‌ ತಿಳಿಸಿದ್ದಾರೆ.

ADVERTISEMENT

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾದ ಕೌರ್ ಅವರು ಮೋದಿ ಸರ್ಕಾರದಲ್ಲಿದ್ದ ಏಕೈಕ ಶಿರೋಮಣಿ ಅಕಾಲಿದಳ ಪ್ರತಿನಿಧಿಯಾಗಿದ್ದರು.

‘ಕೇಂದ್ರದ ರೈತ ವಿರೋಧಿ ಶಾಸನಗಳನ್ನು ವಿರೋಧಿಸಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರೈತರು, ಮಕ್ಕಳು ಮತ್ತು ಸೋದರಿಯರ ಪರವಾದ ನನ್ನ ನಿಲುವಿನ ಬಗ್ಗೆ ನನಗೆ ಹೆಮ್ಮೆ ಇದೆ,’ ಎಂದು ಹರ್‌ಸಿಮ್ರತ್‌ ಕೌರ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.