ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ವಾಗ್ದಾಳಿ ನಡೆಸಿದರು.
ಚರಖಿ ದಾದರಿ ಜಿಲ್ಲೆಯ ಬಧ್ರಾದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಇಂದು. ಮಹಾತ್ಮ ಗಾಂಧಿ ನಮಗೆ ಸತ್ಯ ಮತ್ತು ಅಹಿಂಸೆಯ ಬಗ್ಗೆ ಹೇಳಿದ್ದಾರೆ. ಆದರೆ, ಈಗ ಅಧಿಕಾರದಲ್ಲಿ ಇರುವವರು ಎಷ್ಟು ಸತ್ಯ, ಎಷ್ಟು ಸುಳ್ಳು ಹೇಳುತ್ತಾರೆ’ ಎಂದು ಪ್ರಶ್ನಿಸಿದರು.
‘ಮೋದಿ ಅವರ ಅಸಂಖ್ಯಾತ ಸುಳ್ಳು ಮತ್ತು ಭರವಸೆಗಳ ಬಗ್ಗೆ ನಿಮಗೆ ತಿಳಿದಿದೆ. ಕಳೆದ ಹತ್ತು ವರ್ಷಗಳಲ್ಲಿ ಮಿತಿಯೇ ಇಲ್ಲದಷ್ಟು ಭರವಸೆಗಳನ್ನು ನೀಡಿದ್ದಾರೆ. ಚುನಾವಣೆಗೂ ಮೊದಲು ‘ಗೆದ್ದೆರೆ ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಜಮಾ ಮಾಡಲಾಗುವುದು ಎಂಬುದಾಗಿ ಹೇಳುತ್ತಾರೆ. ಆದರೆ, ಗೆದ್ದ ಬಳಿಕ ಚಕಾರ ಎತ್ತುವುದಿಲ್ಲ‘ ಎಂದು ಲೇವಡಿ ಮಾಡಿದರು.
‘ಹತ್ತು ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿ ಇರುವವರು ಸುಳ್ಳು ಹೇಳಬಹುದೇ? ಪಂಡಿತ್ ಜವಾಹರ್ ಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಅಥವಾ ರಾಜೀವ್ ಗಾಂಧಿ ಅವರು ಈ ರೀತಿ ಸುಳ್ಳು ಹೇಳಿದ್ದರೇ; ಇಲ್ಲ, ಯಾರೂ ಈ ರೀತಿ ಮಾಡಿರಲಿಲ್ಲ’ ಎಂದರು.
‘ಕಾಂಗ್ರೆಸ್‌ನವರು ಕಪ್ಪು ಹಣವನ್ನು ವಿದೇಶಗಳಲ್ಲಿ ಇಡುತ್ತಾರೆ. ಅದನ್ನು ವಾಪಸ್ ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಪಾವತಿಸುತ್ತೇವೆ ಎಂದರು. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಹತ್ತು ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಅವೆಲ್ಲ ಈಗ ಎಲ್ಲಿ ಹೋದವು’ ಎಂದು ಪ್ರಶ್ನಿಸಿದರು.
‘ಬಿಜೆಪಿಯು ಹರಿಯಾಣ ಚುನಾವಣೆ ಸಂದರ್ಭದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದೆ. ಆದರೆ ಖಾಲಿ ಇರುವ 1.60 ಲಕ್ಷ ಹುದ್ದೆಗಳನ್ನೇ ಇನ್ನೂ ಭರ್ತಿ ಮಾಡಿಲ್ಲ’ ಎಂದು ಹರಿಹಾಯ್ದರು.
ರಾಜ್ಯದ ಜನರು ಭೂಪೇಂದ್ರ ಸಿಂಗ್ ಹೂಡಾ ಅವರ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಈಗಲೂ ನೆನಪಿಟ್ಟುಕೊಂಡಿದ್ದಾರೆ. ಪಕ್ಷವು ತಾನು ನೀಡಿದ್ದ ವಾಗ್ದಾನವನ್ನು ಈಡೇರಿಸಿದೆ. ಹೀಗಾಗಿ ಮತ್ತೆ ಮತ್ತೆ ಹೇಳುತ್ತೇನೆ; ಬಿಜೆಪಿಯು ‘ಸುಳ್ಳುಗಳ ಸರದಾರ’ ಮತ್ತು ಪ್ರಧಾನಿ ಮೋದಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಆರೋಪಿಸಿದರು.
ದೇಶದ ಪ್ರಧಾನಮಂತ್ರಿಗಳಾಗಿದ್ದ ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಹೋರಾಡಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ‘ಜೈ ಜವಾನ್, ಜೈ ಕಿಸಾನ್’ ಎಂದು ಹೇಳಿದ್ದರು. ಆದರೆ ಬಿಜೆಪಿಯವರಿಗೆ ಈ ದೇಶದ ಸೈನಿಕರು ಮತ್ತು ಕೃಷಿಕರ ಬಗ್ಗೆ ಗೊತ್ತೇ ಇಲ್ಲ. ಅವರಿಗೆ ತಿಳಿದಿರುವುದು ಆರ್‌ಎಸ್‌ಎಸ್ ಅಜೆಂಡಾ ಒಂದೇ. ಆರ್‌ಎಸ್‌ಎಸ್ ಮತ್ತು ಬಿಜೆಪಿಯಲ್ಲಿ ರೈತರು ಯಾರೂ ಇಲ್ಲ. ಹೀಗಾಗಿಯೇ ಅವರಿಗೆ ರೈತರ ನೋವು, ಸಂಕಟ ಗೊತ್ತಿಲ್ಲ ಎಂದು ಹೇಳಿದರು.
ಹರಿಯಾಣ ಚುನಾವಣೆಯು ಅಕ್ಟೋಬರ್ 5ರಂದು ನಡೆಯಲಿದೆ. ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.