ಚಂಡಿಗಡ: ‘ನಮ್ಮ ರಾಜ್ಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರೈತರನ್ನು ಪ್ರಚೋದಿಸುತ್ತಿದ್ದಾರೆ‘ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆರೋಪಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಯಾರು ರೈತ ವಿರೋಧಿ ಕ್ಯಾಪ್ಟನ್ ಅಮರೀಂದರ್ ಜಿ ? ಪಂಜಾಬ್ ರಾಜ್ಯವೋ, ಹರಿಯಾಣವೋ ? ಎಂದು ಪ್ರಶ್ನಿಸಿರುವ ಖಟ್ಟರ್, ‘ನಮ್ಮ ಸರ್ಕಾರ ರೈತರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ‘ ಎಂದು ಹೇಳುವ ಜತೆಗೆ, ರಾಜ್ಯದಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದ್ದಾರೆ.
‘ಹರಿಯಾಣ ಸರ್ಕಾರ ಭತ್ತ, ಗೋಧಿ, ಸಾಸಿವೆ, ಬಾಜ್ರಾ, ಕಡಲೆ, ಹೆಸರು, ಮುಸುಕಿನ ಜೋಳ, ಶೇಂಗಾ, ಸೂರ್ಯಕಾಂತಿ, ಹತ್ತಿ – ಒಟ್ಟು ಹತ್ತು ಬೆಳೆಗಳನ್ನು ರೈತರಿಗೆ ಬೆಂಬಲ ಬೆಲೆ ನೀಡಿ(ಎಂಎಸ್‌ಪಿ) ಖರೀದಿಸುತ್ತಿದೆ. ಪಂಜಾಬ್ ಈ ರೀತಿ ಎಂಎಸ್‌ಪಿ ನೀಡಿ ಎಷ್ಟು ಬೆಳೆಗಳನ್ನು ರೈತರಿಂದ ಖರೀದಿಸುತ್ತಿದೆ‘ ಎಂದು ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ‘ಕಳೆದ ಏಳು ವರ್ಷಗಳಿಂದ ಹರಿಯಾಣವು ತನ್ನ ರೈತರಿಗೆ ಕಬ್ಬಿಗೆ ದೇಶದಲ್ಲಿಯೇ ಅತ್ಯಧಿಕ ಎಂಎಸ್‌ಪಿಯನ್ನು ಪಾವತಿಸುತ್ತಿದೆ‘ ಎಂದೂ ಅವರು ಹೇಳಿದ್ದಾರೆ.
ಹರಿಯಾಣದ ಕರ್ನಾಲ್‌ನಲ್ಲಿ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಉಲ್ಲೇಖಿಸಿದ್ದ ಅಮರೀಂದರ್ ಸಿಂಗ್, ‘ನಿಮ್ಮ ಪ್ರತಿಭಟನಾ ನಿರತ ರೈತರ ಮೇಲೆ ದಾಳಿ ನಡೆಸಿರುವುದು ನಾಚಿಕೇಡಿನ ಸಂಗತಿ‘ ಎಂದು ಇತ್ತೀಚೆಗೆ ಆರೋಪಿಸಿದ್ದರು.
‘ನಿಮ್ಮ ಪಕ್ಷ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಕೃಷಿ ವಲಯವನ್ನು ಸಂಕಷ್ಟಕ್ಕೆ ದೂಡಿದೆ. ಮೊದಲು ಆ ಕಾಯ್ದೆಗಳನ್ನು ರದ್ದುಗೊಳಿಸಿ‘ ಎಂದು ಒತ್ತಾಯಿಸಿದ್ದರು. ಇದಕ್ಕೆ ಮನೋಹರ್ ಖಟ್ಟರ್ ಅವರು ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.