ಚಂಡೀಗಢ: ಅ.7ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಹರಿಯಾಣದ ಐಪಿಎಸ್ ಅಧಿಕಾರಿ ವೈ. ಪೂರನ್ ಕುಮಾರ್ ಅವರ ಅಂತ್ಯಕ್ರಿಯು 8 ದಿನಗಳ ಬಳಿಕ ಬುಧವಾರ ಇಲ್ಲಿನ ಸೆಕ್ಟರ್ 25ರ ಸ್ಮಶಾನದಲ್ಲಿ ನಡೆಯಿತು.
ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಪೂರನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಸಾವಿಗೆ ಇಲಾಖೆಯ ಕೆಲವು ಅಧಿಕಾರಿಗಳು ಕಾರಣ ಎಂದು ಮರಣಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಬಗ್ಗೆ ತನಿಖೆಗೆ ಆಗ್ರಹಿಸಿ ಅವರ ಕುಟುಂಬ ಸದಸ್ಯರು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಿರಲಿಲ್ಲ.
ಮರಣೋತ್ತರ ಪರೀಕ್ಷೆ ಅನುಮತಿಗಾಗಿ ಚಂಡೀಗಢ ಪೊಲೀಸರು ಸ್ಥಳೀಯ ಕೋರ್ಟ್ ಮೊರೆ ಹೋಗಿದ್ದರು. ಬುಧವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆಗೆ ಅವರ ಪತ್ನಿ ಒಪ್ಪಿಗೆ ಸೂಚಿಸಿದರು. ಬಳಿಕ ಇಲ್ಲಿನ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೊದಲು ಸ್ವಲ್ಪ ಸಮಯ ಪೂರನ್ ಅವರ ಪೊಲೀಸ್ ಸಮವಸ್ತ್ರ ಮತ್ತು ಕ್ಯಾಪ್ ಅನ್ನು ಅವರ ಪಾರ್ಥಿವ ಶರೀರದ ಮೇಲೆ ಇರಿಸಲಾಗಿತ್ತು. ಅಂತ್ಯಸಂಸ್ಕಾರಕ್ಕೆ ಸೇರಿದವರು ಪೂರನ್ ಕುಮಾರ್ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು. ಭಾವುಕ ಕ್ಷಣಗಳಿಗೆ ಸೆಕ್ಟರ್ 25ರ ಸ್ಮಶಾನ ಸಾಕ್ಷಿಯಾಯಿತು.
ಪೂರನ್ ಪತ್ನಿ ಅಮ್ನೀತ್ ಪಿ. ಕುಮಾರ್ ಮತ್ತು ಇಬ್ಬರು ಪುತ್ರಿಯರು ಅಂತಿಮ ನಮನ ಸಲ್ಲಿಸಿದರು. ಪೊಲೀಸ್ ತುಕಡಿಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಹರಿಯಾಣದ ಡಿಜಿಪಿ ಒ.ಪಿ. ಸಿಂಗ್, ಪ್ರಧಾನ ಕಾರ್ಯದರ್ಶಿ ಸುಮಿತ್ರಾ ಮಿಶ್ರಾ ಸೇರಿದಂತೆ ಗಣ್ಯರು ಅಂತಿಮ ನಮನ ಸಲ್ಲಿಸಿದರು.
Quote - ಸಾಧ್ಯವಾದಷ್ಟು ಬೇಗ ನ್ಯಾಯ ಸಿಗುವಂತೆ ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯುವ ಭರವಸೆ ಇದೆ ಅಮ್ನೀತ್ ಪಿ. ಕುಮಾರ್ ಪೂರನ್ ಅವರ ಪತ್ನಿ ಐಎಎಸ್ ಅಧಿಕಾರಿ
Cut-off box - ‘ತನಿಖೆ ನಡೆಯುವ ಭರವಸೆ‘ ‘ಚಂಡೀಗಢ ಪೊಲೀಸರು ಮತ್ತು ಹರಿಯಾಣ ಸರ್ಕಾರದಿಂದ ಪೂರನ್ ಸಾವಿನ ಬಗ್ಗೆ ನ್ಯಾಯಯುತ ತನಿಖೆ ನಡೆಯುವ ಭರವಸೆ ಲಭಿಸಿದ್ದರಿಂದ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಲಾಯಿತು’ ಎಂದು ಅವರ ಪತ್ನಿ ಐಎಎಸ್ ಅಧಿಕಾರಿ ಅಮ್ನೀತ್ ಪಿ. ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.