ADVERTISEMENT

ಹಾಥರಸ್ ಅತ್ಯಾಚಾರ ಪ್ರಕರಣ: ನ್ಯಾಯಾಂಗ ತನಿಖೆಗೆ ಒತ್ತಾಯ

ಸಂತ್ರಸ್ತ ಕುಟುಂಬದ ವಿರುದ್ಧ ಠಾಕೂರ್‌ ಜನರ ಸಭೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 18:51 IST
Last Updated 4 ಅಕ್ಟೋಬರ್ 2020, 18:51 IST
ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮತ್ತು ಪಕ್ಷದ ಕಾರ್ಯಕರ್ತರು ಹಾಥರಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ಕಾಲ್ನಡಿಗೆ ಮೂಲಕ ತೆರಳಿದರು –ಪಿಟಿಐ ಚಿತ್ರ
ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮತ್ತು ಪಕ್ಷದ ಕಾರ್ಯಕರ್ತರು ಹಾಥರಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ಕಾಲ್ನಡಿಗೆ ಮೂಲಕ ತೆರಳಿದರು –ಪಿಟಿಐ ಚಿತ್ರ   

ಲಖನೌ/ಹಾಥರಸ್: ಹಾಥರಸ್‌ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ದೇಶದ ಹಲವೆಡೆ ಭಾನುವಾರವೂ ಪ್ರತಿಭಟನೆ ನಡೆದಿದೆ. ಸಮಾಜವಾದಿ ಪಕ್ಷ ಮತ್ತು ಭೀಮ್ ಆರ್ಮಿಯ ನಿಯೋಗಗಳು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿವೆ. ‘ಈ ಪ್ರಕರಣದಲ್ಲಿ ತಮ್ಮ ಸಮುದಾಯದ ಯುವಕರನ್ನು ಸಿಲುಕಿಸಲಾಗುತ್ತಿದೆ. ನಮ್ಮ ಯುವಕರಿಗೆ ನ್ಯಾಯ ಸಿಗದೇ ಇದ್ದರೆ ಹೋರಾಟ ನಡೆಸುತ್ತೇವೆ’ ಎಂದು ಠಾಕೂರ್ ಸಮುದಾಯದ ನಾಯಕರು ಅತ್ಯಾಚಾರ ಆರೋಪಿಗಳ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ಸಂತ್ರಸ್ತ ಕುಟುಂಬ ಮತ್ತು ವಿರೋಧ ಪಕ್ಷಗಳು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿವೆ.

ಹೇಳಿಕೆ ಬದಲಿಸುವಂತೆ ಸಂತ್ರಸ್ತ ಕುಟುಂಬದ ಮೇಲೆ ಹಾಥರಸ್ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಒತ್ತಡ ಹೇರುತ್ತಿರುವ ವಿಡಿಯೊ ಮತ್ತೆ ವೈರಲ್ ಆಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಬಂಧಿತರಾಗಿರುವ ನಾಲ್ವರು ಆರೋಪಿಗಳೂ ಠಾಕೂರ್‌ ಸಮುದಾಯಕ್ಕೆ ಸೇರಿದವರು. ಈ ಸಂಬಂಧ ಸಂತ್ರಸ್ತ ಕುಟುಂಬದ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮದ ಠಾಕೂರ್‌ ಸಮುದಾಯದ ಜನರು ತಮ್ಮ–ತಮ್ಮ ಗ್ರಾಮಗಳಲ್ಲಿ ಸಭೆ ನಡೆಸಿದ್ದಾರೆ. ಕೆಲವೆಡೆ ಪ್ರತಿಭಟನೆ
ಯನ್ನೂ ನಡೆಸಿದ್ದಾರೆ. ಈ ಬಗ್ಗೆ ಸಂತ್ರಸ್ತ ಕುಟುಂಬವು ಆತಂಕ ವ್ಯಕ್ತಪಡಿಸಿದೆ.

ADVERTISEMENT

‘ಬಂಧಿತರಾಗಿರುವ ಯುವಕರು ಮುಗ್ಧರು. ಸಂತ್ರಸ್ತೆಯ ಕುಟುಂಬದವರು ಪದೇ–ಪದೇ ಹೇಳಿಕೆ ಬದಲಿಸು
ತ್ತಿದ್ದಾರೆ. ಟಿಆರ್‌ಪಿಗಾಗಿ ಮಾಧ್ಯಮಗಳೂ ಸಂತ್ರಸ್ತ ಕುಟುಂಬದ ಪರವಾಗಿ ವರದಿ ಮಾಡುತ್ತಿವೆ, ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಿವೆ. ಹೀಗಾಗಿ ಜಿಲ್ಲಾಡಳಿತವು ಅಮಾಯಕ ಯುವಕರನ್ನು ಬಂಧಿಸಿದೆ’ ಎಂದು ಬಿಜೆಪಿ ಶಾಸಕ ರಾಜವೀರ್ ಸಿಂಗ್ ಠಾಕೂರ್ ಆರೋಪಿಸಿದ್ದಾರೆ.

‘ವಾಲ್ಮಿಕಿ ಸಮುದಾಯದ ಬಿಜೆಪಿ ಶಾಸಕರೊಬ್ಬರ ಒತ್ತಡದಿಂದ ಠಾಕೂರ್ ಸಮುದಾಯದ ಯುವಕರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಮ್ಮ ಸಮುದಾಯದ ಯುವಕರನ್ನು ರಕ್ಷಿಸಿಕೊಳ್ಳಲು ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಠಾಕೂರ್ ಸಮುದಾಯದ ಯುವನಾಯಕ ನಿಶಾಂತ್ ಚೌಹಾಣ್ ಎಚ್ಚರಿಕೆ ನೀಡಿದ್ದಾರೆ.

ಠಾಕೂರ್ ಸಮುದಾಯದ ಕೆಲವು ಯುವಕರು ಸಂತ್ರಸ್ತ ಕುಟುಂಬದ ಮನೆಯ ಸಮೀಪ ಹೋಗಿ ಪ್ರತಿಭಟನೆ ನಡೆಸಿದ್ದಾರೆ. ಆನಂತರ ಗ್ರಾಮದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ವಿಪಕ್ಷ–ಪೊಲೀಸರ ಜಟಾಪಟಿ:ಭಾನುವಾರ ಭೀಮ್ ಆರ್ಮಿ ಮತ್ತು ಸಮಾಜವಾದಿ ಪಕ್ಷದ ನಿಯೋಗಗಳು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಯತ್ನಿಸಿದವು. ಅವರನ್ನು ಪೊಲೀಸರು ತಡೆದ ಕಾರಣ ಮಾತಿನ ಚಕಮಕಿ ಮತ್ತು ಪ್ರತಿಭಟನೆ ನಡೆಯಿತು.

ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮತ್ತು ನೂರಾರು ಕಾರ್ಯಕರ್ತರು ದೆಹಲಿ
ಯಿಂದ ಹಾಥರಸ್‌ನತ್ತ ಹೊರಟಿದ್ದರು. ಉತ್ತರ ಪ್ರದೇಶ ಗಡಿ ಪ್ರವೇಶಿಸುತ್ತಿದ್ದಂತೆ ಪೊಲೀಸರು ಅವರನ್ನು ತಡೆದರು. ಮಾತಿನ ಚಕಮಕಿಯ ನಂತರ ಭೀಮ್ ಆರ್ಮಿಯ ನಿಯೋಗವು ಹಾಥರಸ್‌ನತ್ತ ಹೊರಟಿತು. ಹಾಥರಸ್‌ ಗಡಿಯಲ್ಲಿ ಅವರನ್ನು ಮತ್ತೆ ತಡೆಯಲಾಯಿತು. ಆಗ ಪ್ರತಿಭಟನೆ ನಡೆಯಿತು. ಅಲ್ಲಿಂದ ಸಂತ್ರಸ್ತ ಕುಟುಂಬದ ಮನೆಯನ್ನು 5 ಕಿ.ಮೀ. ಕಾಲ್ನಡಿಗೆಯ ಮೂಲಕ ನಿಯೋಗವು ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.