ಮದ್ಯ
– ಪ್ರಜಾವಾಣಿ ಚಿತ್ರ
ಮುಂಬೈ: ಅಂಗವಿಕಲ ಮಕ್ಕಳ ಆಶ್ರಯ ಕೇಂದ್ರವೊಂದರಲ್ಲಿ ಮದ್ಯಪಾನ ತಂದು ಹೊಸ ವರ್ಷದ ಪಾರ್ಟಿ ನಡೆಸಿದ್ದ 13 ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಶ್ರಯ ಕೇಂದ್ರದ ಅಧಿಕಾರಿಗಳ ವಿರುದ್ಧ ಬಾಂಬೆ ಹೈಕೋರ್ಟ್ ಸೋಮವಾರ ತನಿಖೆಗೆ ಆದೇಶಿಸಿದೆ.
ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ಸಂದೀಪ್ ಮಾರ್ನೆ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ನೀಡಿದ್ದು, ಘಟನೆ ನಡೆದು 13 ವರ್ಷವಾದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
ಮಾನಖರ್ಡ್ ಉಪನಗರದಲ್ಲಿರುವ ಸರ್ಕಾರಿ ಅನುದಾನಿತ ಅಂಗವಿಕಲ ಮಕ್ಕಳ ಆಶ್ರಯ ಕೇಂದ್ರದಲ್ಲಿ 2012ರ ಡಿಸೆಂಬರ್ 31ರಂದು ಮಹಿಳಾ ಡಾನ್ಸರ್‌ಗಳನ್ನು ಕರೆಸಿ, ಮದ್ಯಪಾನ ಸೇವನೆ ಮಾಡಿ, ಪಾರ್ಟಿ ನಡೆಸಿದ್ದ ಆರೋಪ ಕೇಳಿಬಂದಿತ್ತು.
2014ರಲ್ಲಿ ಸಾಮಾಜಿಕ ಕಾರ್ಯಕರ್ತರಾದ ಸಂಗೀತಾ ಪುನೇಕರ್ ಅವರು ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿದ್ದರು. ಆ ಅರ್ಜಿಯನ್ನು ನ್ಯಾಯಪೀಠ ಇದೀಗ ವಿಚಾರಣೆ ನಡೆಸಿದೆ.
ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, 6 ವಾರಗಳ ಒಳಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಹಾಗೂ 3 ತಿಂಗಳ ಒಳಗೆ ನ್ಯಾಯಾಲಯಕ್ಕೂ ಪ್ರಕರಣದ ಅನುಸರಣಾ ವರದಿ ಸಲ್ಲಿಸುವಂತೆ ಅಂಗವಿಕಲರ ಇಲಾಖೆಯ ಆಯುಕ್ತರಿಗೆ ನ್ಯಾಯಪೀಠ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.