
ನವದೆಹಲಿ: ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ಆಲಂಗಿಸಿದ್ದ ವಿಚಾರಕ್ಕೆ ಸಾಕಷ್ಟು ಟೀಕೆಗೊಳಗಾಗಿರುವ ಪಂಜಾಬ್ ಸಚಿವ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಅದೊಂದು ‘ಭಾವನಾತ್ಮಕ ಕ್ಷಣ’ ಎಂದು ಬಣ್ಣಿಸಿದ್ದಾರೆ.
ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗಿದ್ದ ಸಿಧು, ’ಈ ಭೇಟಿಯು ರಾಜಕೀಯ ಪ್ರೇರಿತವಲ್ಲ’ ಎಂದು ಸ್ಪಷ್ಟನೆ ನೀಡಿದ್ದರು.ಇದೇ ಕಾರ್ಯಕ್ರಮದ ವೇಳೆ ಪಾಕಿಸ್ತಾನ ಸೇನಾ ಮುಖ್ಯಸ್ಥರಖಮರ್ ಜಾವೇದ್ ಬಜ್ವಾ ಅವರನ್ನು ಅಪ್ಪಿಕೊಂಡಿದ್ದರು.
‘ಸಿಖ್ ಧಾರ್ಮಿಕ ತಾಣವಾಗಿರುವ ಕರ್ತಾಪುರಕ್ಕೆ ಪ್ರವೇಶ ನಿರ್ಬಂಧ ತೆರವುಗೊಳಿಸುವ ಸಲುವಾಗಿ ಶ್ರಮಿಸುತ್ತಿರುವುದಾಗಿ ಪಾಕಿಸ್ತಾನ ಸೇನಾಧಿಕಾರಿ ಹೇಳಿದರು. ಅದು ಭಾವನಾತ್ಮಕ ಸನ್ನಿವೇಶಕ್ಕೆ ಎಡೆ ಮಾಡಿಕೊಟ್ಟಿತು’ ಎಂದು ಸಿಂಗ್ ಹೇಳಿದ್ದಾರೆ.
ಸಿಧು ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದೊಂದು ನಾಚಿಕೆಗೇಡಿನ ಪರಮಾವಧಿ ಎಂದು ಶಿವಸೇನಾ ಟೀಕಿಸಿದೆ.ಬಜರಂಗದಳದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ್ ಜಾಟ್ ಇದು ದೇಶದ್ರೋಹದ ಪ್ರಕರಣ ಎಂದು ದೂರಿದ್ದಾರೆ.
ಇದಕ್ಕೆ ಪ್ರತಿಯಾಗಿ ಸಿಧು,‘ಸಮಯ ಬಂದಾಗ ತಕ್ಕ ಉತ್ತರ ನೀಡುತ್ತೇನೆ’ ಎಂದಿದ್ದರು.
ಪ್ರಕರಣ ಸಂಬಂಧ ಮಾತನಾಡಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ‘ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗುವ ಸಿಧು ಅವರ ನಿರ್ಧಾರಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಮಾಜಿ ಕ್ರಿಕೆಟಿಗರಾದ ಸಿಧು ವೈಯಕ್ತಿಕ ವಿಚಾರವಾಗಿ ಅಲ್ಲಿಗೆ ಭೇಟಿ ನೀಡಿದ್ದರು ಅಷ್ಟೇ’ ಎಂದಿದ್ದಾರೆ.
‘ಇದು ಪ್ರಜಾಪ್ರಭುತ್ವ ರಾಷ್ಟ್ರ. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಎಲ್ಲರಿಗೂ ಇದೆ’ ಎಂದಿರುವ ಸಿಧು, ತಮ್ಮ ಭೇಟಿಯನ್ನುಪಾಕಿಸ್ತಾನ ಜೊತೆಗೆ ಶಾಂತಿಯುತ ಸಂಬಂಧ ಕಾಪಾಡಿಕೊಳ್ಳಲು ಪ್ರಯತ್ನಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲಿಸಿದ ಗೌರವ ಎಂದು ಹೇಳಿಕೊಂಡಿದ್ದಾರೆ.
‘ಶಾಂತಿ ಕಾಪಾಡುವ ಸಂಬಂಧ ಈ ಹಿಂದೆಯೂ ಪ್ರಯತ್ನಗಳು ನಡೆದಿವೆ. ವಾಜಪೇಯಿ ಅವರು ಲಾಹೋರ್‌ನತ್ತ ದೋಸ್ತಿ ಬಸ್‌ಸಂಚಾರ ಆರಂಭಿಸಿದ್ದರು. ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರಿಗೂ ಆಹ್ವಾನ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಪಾಕ್ ಪ್ರಧಾನಿ ನವಾಜ್ ಷರೀಫ್‌ರನ್ನು ಆಹ್ವಾನಿಸಿದ್ದರು. ಇದ್ದಕ್ಕಿದ್ದಂತೆ ಮೋದಿಯವರೂ ಲಾಹೋರ್‌ಗೆ ಹೋಗಿದ್ದರು’ ಎಂದಿದ್ದಾರೆ.
ಪಾಕ್ ಭೇಟಿ ವೇಳೆ ಮೋದಿ ಅವರು ಷರೀಫ್ ಅವರನ್ನು ಆಲಂಗಿಸಿದ್ದ ಬಗ್ಗೆಯೂ ಪ್ರಸ್ತಾಪಿಸಿರುವ ಸಿಧು, ‘ಯಾರೊಬ್ಬರೂ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸುವುದಿಲ್ಲ’ ಎಂದಿದ್ದಾರೆ.
‘ನಾನು ಪಾಕಿಸ್ತಾನದಿಂದ ಹತ್ತು ಬಾರಿ ಆಹ್ವಾನ ಸ್ವೀಕರಿಸಿದ್ದೇನೆ. ನಂತರ ಭಾರತ ಸರ್ಕಾರದ ಅನುಮತಿ ಕೋರಿದ್ದೆ. ಆದರೆ ನನಗೆ ಅನುಮತಿ ಸಿಗಲಿಲ್ಲ. ಪಾಕಿಸ್ತಾನ ಸರ್ಕಾರವು ನನಗೆ ವೀಸಾ ನೀಡಿದ ಎರಡು ದಿನಗಳ ನಂತರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಕರೆ ಮಾಡಿ ಅನುಮತಿ ನೀಡಿರುವುದಾಗಿ ತಿಳಿಸಿದರು’ ಎಂದೂ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.