ADVERTISEMENT

ವೈದ್ಯಕೀಯ ಸೌಲಭ್ಯ ಸಜ್ಜುಗೊಳಿಸಿ: 11 ಪಾಲಿಕೆಗಳಿಗೆ ಕೇಂದ್ರ ಸೂಚನೆ

ಕೊರೊನಾ ಕಂಟಕ

ಪಿಟಿಐ
Published 24 ಮೇ 2020, 19:22 IST
Last Updated 24 ಮೇ 2020, 19:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ಮುಂದಿನ ಎರಡು ತಿಂಗಳು ಕೋವಿಡ್ ಸ್ಥಿತಿಯನ್ನು ಸಮರ್ಥ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯವಿರುವ ವೈದ್ಯಕೀಯ ಮೂಲಸೌಕರ್ಯವನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ದೇಶದಲ್ಲಿನ ಕೊರೊನಾ ಪ್ರಕರಣಗಳ ಪೈಕಿ ಶೇ 70ರಷ್ಟು ವರದಿಯಾಗಿರುವ ಭಾಗಗಳು ವ್ಯಾಪ್ತಿಗೆ ಒಳಪಡುವ 11 ನಗರಪಾಲಿಕೆಗಳ ಆಡಳಿತಗಳಿಗೆ ಈ ಕುರಿತು ಸ್ಪಷ್ಟ ಸಂದೇಶ ರವಾನಿಸಿದೆ.

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌, ದೆಹಲಿ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನಗಳಲ್ಲಿ ಈ 11 ನಗರಪಾಲಿಕೆಗಳು ಬರಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ತಮ್ಮ ಭಾಗದಲ್ಲಿ ಬರುವ ಹಳೆಯ ಬಡಾವಣೆಗಳು, ಕೊಳೆಗೇರಿಗಳು ಮತ್ತು ಹೆಚ್ಚು ದಟ್ಟಣೆಯಿರುವ ಪ್ರದೇಶಗಳನ್ನು ಗಂಭೀರವಾಗಿ ಅವಲೋಕಿಸಿ ಕ್ರಮವಹಿಸಬೇಕು. ಅಲ್ಲದೆ, ವಲಸೆ ಕಾರ್ಮಿಕರು ಇರುವ ಶಿಬಿರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ನಿರ್ದೇಶಿಸಲಾಗಿದೆ.

ಆ ನಗರಪಾಲಿಕೆಗಳ ಆಯುಕ್ತರು ಹಾಗೂ ಆಯಾ ರಾಜ್ಯಗಳ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗಳ ಜೊತೆಗೆ ವಿಡಿಯೊ ಸಂವಾದ ನಡೆಸಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಪ್ರೀತಿ ಸುಡಾನ್‌, ‘ಈ ಭಾಗಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಹೆಚ್ಚು ಒತ್ತು ನೀಡುವುದರ ಜತೆಗೆ ಕೋವಿಡ್ ಪ್ರಕರಣಗಳ ತಪಾಸಣೆಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.