ADVERTISEMENT

ಕರ್ನಾಟಕದ ಶೇ 70 ಜನರಿಗೆ ಕೊರೊನಾ ಸಂಪರ್ಕ: ಐಸಿಎಂಆರ್‌ ಸೆರೊ ಸಮೀಕ್ಷೆಯ ವರದಿ

ಐಸಿಎಂಆರ್‌ ಸೆರೊ ಸಮೀಕ್ಷೆಯ ವರದಿಯಲ್ಲಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 20:03 IST
Last Updated 28 ಜುಲೈ 2021, 20:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಕರ್ನಾಟಕದ ಶೇ 70ರಷ್ಟು ಜನರು ಒಂದೂವರೆ ವರ್ಷದಲ್ಲಿ ಕೊರೊನಾ ವೈರಾಣುವಿನ ಸಂಪರ್ಕಕ್ಕೆ ಬಂದಿದ್ದಾರೆ. ದೇಶದ ಸರಾಸರಿ ಶೇ 67ರಷ್ಟು ಜನರು ಕೊರೊನಾವೈರಾಣು ಸಂಪರ್ಕಕ್ಕೆ ಬಂದಿದ್ದಾರೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್‌) ನಾಲ್ಕನೇ ಸೆರೊ ಸಮೀಕ್ಷೆಯ ವರದಿ ಹೇಳಿದೆ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲೂ ಸೆರೊ ಸಮೀಕ್ಷೆ ನಡೆಸಿ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.

ರಾಜ್ಯವಾರು ಸೆರೊ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ‘ಎಲ್ಲಾ ರಾಜ್ಯಗಳು ತಮ್ಮ ಜಿಲ್ಲೆಗಳ ಸೆರೊ ಸಮೀಕ್ಷೆ ನಡೆಸಬೇಕು. ಆ ಮೂಲಕ ಲಭ್ಯವಾದ ದತ್ತಾಂಶದ ಪ್ರಕಾರ ಕೋವಿಡ್‌ ಹರಡುವುದನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.

ದೇಶದ ಶೇ 67.6ರಷ್ಟು ಜನರು ಕೊರೊನಾವೈರಾಣುವಿನ ಸಂಪರ್ಕಕ್ಕೆಬಂದಿರುವ ಸಾಧ್ಯತೆ ಇದೆ ಎಂದುಇದೇ ಜೂನ್-ಜುಲೈನಲ್ಲಿ ನಡೆದ ನಾಲ್ಕನೇ ಸೆರೊ ಸಮೀಕ್ಷೆಯ ವರದಿ ಹೇಳಿದೆ. ದೇಶದ 70 ಜಿಲ್ಲೆಗಳಲ್ಲಿ ಮಾತ್ರವೇ ಈ ಸಮೀಕ್ಷೆ ನಡೆಸಲಾಗಿತ್ತು. ಹೀಗಾಗಿ ಎಲ್ಲಾ ಜಿಲ್ಲೆಗಳ ಪೂರ್ಣ ಮತ್ತು ಕರಾರುವಕ್ಕಾದ ಚಿತ್ರಣ ಲಭ್ಯವಿಲ್ಲ. ಕರಾರುವಕ್ಕಾದ ಚಿತ್ರಣ ಲಭ್ಯವಾಗಲು ಎಲ್ಲಾ ಜಿಲ್ಲೆಗಳಲ್ಲಿ ಸೆರೊ ಸಮೀಕ್ಷೆ ನಡೆಸಬೇಕು. ರಾಜ್ಯ ಸರ್ಕಾರಗಳೇ ಈ ಸಮೀಕ್ಷೆ ನಡೆಸಬೇಕು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ADVERTISEMENT

‘ಶೇ 67.6ರಷ್ಟು ಜನರು ಕೊರೊನಾವೈರಾಣುವಿನ ಸಂಪರ್ಕಕ್ಕೆ ಬಂದಿದ್ದಾರೆ ಎಂದರೆ, ಅವರೆಲ್ಲರೂ ಕೋವಿಡ್‌ಗೆ ಒಳಗಾಗಿದ್ದಾರೆ ಎಂದಲ್ಲ. ಅಷ್ಟೂ ಜನರು ಸೋಂಕಿನ ಸಂಪರ್ಕಕ್ಕೆ ಬಂದಿದ್ದಾರೆ, ವೈರಾಣು ಅಷ್ಟು ಜನರ ಮಧ್ಯೆ ಹರಡಿದೆ. ಆದರೆ ಅದರಲ್ಲಿ ಕೆಲವರಷ್ಟೇ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದರ್ಥ’ ಎಂದು ಆರೋಗ್ಯ ಸಚಿವಾಲಯ ವಿವರಿಸಿದೆ.

ಎಲ್ಲರೂ ವರದಿಯಾಗಿಲ್ಲ: ‘ಇಷ್ಟೆಲ್ಲಾ ಜನರು ವೈರಾಣುವಿನ ಸಂಪರ್ಕಕ್ಕೆ ಬಂದಿದ್ದರೂ, ಅವೆಲ್ಲವೂ ವರದಿಯಾಗಿಲ್ಲ. ಬಹುಶಃ ಸಾಕಷ್ಟು ಪ್ರಕರಣಗಳು ಮತ್ತು ಕೋವಿಡ್‌ ಸಾವುಗಳು ವರದಿಯಾಗದೇ ಹೋಗಿರಬಹುದು’ ಎಂದು ಕೋಯಿಕ್ಕೋಡ್ ಐಐಎಂ ಪ್ರಾಧ್ಯಾಪಕ ರಿಜೊ ಜಾನ್ ಅಭಿಪ್ರಾಯಪಟ್ಟಿದ್ದಾರೆ.

‘ಕೇರಳ ಮತ್ತು ಮಹಾರಾಷ್ಟ್ರದಲ್ಲಿ ವರದಿಯಾದ ಪ್ರಕರಣಗಳ ಪ್ರಮಾಣ ಹೆಚ್ಚು. ಬಿಹಾರದಲ್ಲಿ ಪ್ರತಿ 134 ಕೋವಿಡ್‌ ಪ್ರಕರಣಗಳಲ್ಲಿ ಒಂದು ಪ್ರಕರಣವಷ್ಟೇ ಪತ್ತೆಯಾಗಿದೆ. ಉತ್ತರ ಪ್ರದೇಶದ ಪ್ರತಿ 100ಪ್ರಕರಣಗಳಲ್ಲಿ ಕೇವಲ ಒಂದು ಪ್ರಕರಣವಷ್ಟೇ ಪತ್ತೆಯಾಗಿದೆ. ಕೇರಳದ ಪ್ರತಿ ಆರು ಪ್ರಕರಣಗಳಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದರೆ, ಮಹಾರಾಷ್ಟ್ರದ ಪ್ರತಿ 12 ಪ್ರಕರಣಗಳಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಪತ್ತೆಯಾಗದೇ ಹೋದ ಪ್ರಕರಣಗಳ ಸಂಖ್ಯೆ ಹೆಚ್ಚು’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.