
ನವದೆಹಲಿ: ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸಲಾಗಿರುವ ಪಾನ್ ಮಸಾಲಾದಂತಹ ಸರಕುಗಳ ಮೇಲೆ ಸೆಸ್ ವಿಧಿಸಲು ಅವಕಾಶ ನೀಡುವ ‘ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ–2025’ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ ಮಂಡಿಸಿದರು.
‘ಅಗತ್ಯ ವಸ್ತುಗಳ ಮೇಲೆ ಈ ಸೆಸ್ ಹೇರುವುದಿಲ್ಲ, ಇದರಿಂದ ಬರುವ ಆದಾಯವನ್ನು ಆರೋಗ್ಯ ಯೋಜನೆಗಳಿಗೆ ಖರ್ಚು ಮಾಡಲು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುವುದು’ ಎಂದು ಮಸೂದೆ ಮಂಡನೆ ವೇಳೆ ಅವರು ತಿಳಿಸಿದರು.
ಎರಡು ಪ್ರಮುಖ ಕ್ಷೇತ್ರಗಳಾದ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಗಾಗಿ ಸಂಪನ್ಮೂಲ ಒದಗಿಸುವ ಮಹತ್ವದ ಉದ್ದೇಶವನ್ನು ಈ ಮಸೂದೆ ಹೊಂದಿದೆ ಎಂದು ಅವರು ಹೇಳಿದರು.
‘ಈ ಸೆಸ್ ಅನ್ನು ಯಾವುದೇ ಅಗತ್ಯ ವಸ್ತುಗಳ ಮೇಲೆ ವಿಧಿಸುವುದಿಲ್ಲ. ಆರೋಗ್ಯಕ್ಕೆ ಅಪಾಯಕಾರಿ ಎಂಬಂತಹ ಸರಕುಗಳ ಮೇಲೆ ಮಾತ್ರ ವಿಧಿಸಲಾಗುವುದು. ಜನರು ಇಂಥ ಅನಾರೋಗ್ಯಕಾರಿ ಸರಕುಗಳನ್ನು ಬಳಸದಂತೆ ತಡೆಯುವ ಉದ್ದೇಶವನ್ನೂ ಈ ಮಸೂದೆ ಹೊಂದಿದೆ’ ಎಂದು ಅವರು ವಿವರಿಸಿದರು.
ಮಸೂದೆಯಲ್ಲಿ, ಪಾನ್ ಮಸಾಲಾ ಉತ್ಪಾದನಾ ಕಾರ್ಖಾನೆಗಳಲ್ಲಿನ ಯಂತ್ರಗಳ ಉತ್ಪಾದನಾ ಸಾಮರ್ಥ್ಯದ ಮೇಲೆಯೂ ಸೆಸ್ ವಿಧಿಸಲು ಪ್ರಸ್ತಾಪಿಸಲಾಗಿದೆ ಎಂದರು.
‘ಜಿಎಸ್‌ಟಿ ಅನ್ನು ಬಳಕೆ ಹಂತದಲ್ಲಿ ವಿಧಿಸಲಾಗುತ್ತದೆ ಮತ್ತು ಪಾನ್ ಮಸಾಲಾ ಮೇಲೆ ಅಬಕಾರಿ ಸುಂಕ ವಿಧಿಸಲಾಗುತ್ತಿಲ್ಲ. ಆದ್ದರಿಂದ ಈ ಸೆಸ್ ಅನ್ನು ಪಾನ್ ಮಸಾಲಾ ಘಟಕಗಳ ಉತ್ಪಾದನಾ ಸಾಮರ್ಥ್ಯದ ಆಧಾರ ಮೇಲೆ ವಿಧಿಸಲಾಗುತ್ತದೆ’ ಎಂದು ಹೇಳಿದರು.
‘ಈ ಸೆಸ್‌ನಿಂದ ಬರುವ ಆದಾಯದ ಒಂದು ಭಾಗವನ್ನು ಆರೋಗ್ಯ ಜಾಗೃತಿ ಅಥವಾ ಇತರ ಆರೋಗ್ಯ ಸಂಬಂಧಿ ಯೋಜನೆಗಳ ಮೂಲಕ ರಾಜ್ಯಗಳ ಜತೆಗೆ ಹಂಚಿಕೊಳ್ಳಲಾಗುವುದು’ ಎಂದು ಅವರು ವಿವರಿಸಿದರು.
ಪ್ರಸ್ತುತ ಪಾನ್ ಮಸಾಲಾ, ತಂಬಾಕು ಇತರ ಸಂಬಂಧಿತ ಉತ್ಪನ್ನಗಳ ಮೇಲೆ ಶೇ 28ರಷ್ಟು ಜಿಎಸ್‌ಟಿ ಮತ್ತು ವಿವಿಧ ದರದಲ್ಲಿ ಪರಿಹಾರ ಸೆಸ್ ವಿಧಿಸಲಾಗುತ್ತಿದೆ. ಪರಿಹಾರ ಸೆಸ್ ಲೆವಿ ಅಂತ್ಯಗೊಂಡಂತೆ, ಜಿಎಸ್‌ಟಿ ದರವು ಶೇ 40ಕ್ಕೆ ಏರುತ್ತದೆ. ಹೆಚ್ಚುವರಿಯಾಗಿ ತಂಬಾಕಿನ ಮೇಲೆ ಅಬಕಾರಿ ಸುಂಕವನ್ನು ಮತ್ತು ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಸೆಸ್ ವಿಧಿಸಲಾಗುತ್ತದೆ ಎಂದು ಅವರು ಹೇಳಿದರು.
. ಉತ್ಪಾದನಾ ಘಟಕಗಳ ಸಾಮರ್ಥ್ಯ ಆಧರಿಸಿ ಸೆಸ್ ವಿಧಿಸಿದರೆ ಅಧಿಕಾರಶಾಹಿ ಹಸ್ತಕ್ಷೇಪ ಹೆಚ್ಚುತ್ತದೆ. ಇದು ‘ಇನ್‌ಸ್ಪೆಕ್ಟರ್ ರಾಜ್’ ವ್ಯವಸ್ಥೆಗೆ ಮತ್ತೆ ದಾರಿ ಮಾಡಿಕೊಡುತ್ತದೆ. ಮಸೂದೆಯಲ್ಲಿ ನ್ಯೂನತೆಗಳನ್ನು ಸರಿಪಡಿಸಲು ಪರಿಶೀಲನಾ ಸಮಿತಿಗೆ ಕಳುಹಿಸಬೇಕುವರುಣ್ ಚೌಧರಿ ಕಾಂಗ್ರೆಸ್ ಸಂಸದ
ಸೆಸ್ ವಿಧಿಸುವುದರಿಂದ ಪಾನ್ ಮಸಾಲಾ ತಂಬಾಕು ಬಳಕೆಯನ್ನು ತಡೆಯಲು ಸಾಧ್ಯವೇ? ಇದಕ್ಕಾಗಿ ಬಿಹಾರದಂತೆ ಪಾನ್ ಮಸಾಲಾ ಮತ್ತು ಸಂಬಂಧಿತ ಪದಾರ್ಥಗಳ ಉತ್ಪನ್ನ ಮತ್ತು ಮಾರಾಟವನ್ನು ನಿಷೇಧಿಸಬೇಕುಸುಧಾಕರ್ ಸಿಂಗ್ ಆರ್‌ಜೆಡಿ ಸಂಸದ
ಸಂಸತ್ ಭವನಕ್ಕೆ ₹20000 ಕೋಟಿ ಪ್ರಧಾನಿ ಅವರ ಕಚೇರಿ ‘ಸೇವಾ ತೀರ್ಥ’ಕ್ಕೆ ನೂರಾರು ಕೋಟಿ ಖರ್ಚು ಮಾಡಲಾಗಿದೆ. ಆ ಹಣವನ್ನು ಪಾನ್ ಮಸಾಲಾ ಮೇಲಿನ ಸೆಸ್‌ನಿಂದ ಸಂಗ್ರಹಿಸಲು ಸರ್ಕಾರ ಮುಂದಾಗಿದೆಸುಗತಾ ರಾಯ್ ಟಿಎಂಸಿ ಸಂಸದ
ಕೇಂದ್ರವು ಆದಾಯ ಹೆಚ್ಚಿಸಿಕೊಳ್ಳಲು ಸೆಸ್‌ಗಳ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ಸೆಸ್‌ಗಳನ್ನು ಹೆಚ್ಚಾಗಿ ವಿಧಿಸುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಇದರಿಂದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ನಲುಗಲಿವೆಸುಮತಿ ಡಿಎಂಕೆ ಸಂಸದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.