ADVERTISEMENT

ಕಾಶ್ಮೀರದಲ್ಲಿ ವಿಪರೀತ ಹಿಮಪಾತ: ವಿದ್ಯುತ್‌ ಕಡಿತ, ಸೇಬು ಬೆಳೆಗೂ ಹಾನಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 12:16 IST
Last Updated 4 ನವೆಂಬರ್ 2018, 12:16 IST
   

ಶ್ರೀನಗರ:ಜಮ್ಮು ಮತ್ತು ಕಾಶ್ಮಿರ ಕಣಿವೆಯಲ್ಲಿ ಪ್ರಸಕ್ತ ವರ್ಷ ಆರಂಭವಾದ ಹಿಮಪಾತ ಎರಡನೇ ದಿನವೇ ಬಾರಿ ಪ್ರಮಾಣದಲ್ಲಿ ಬಿದ್ದಿದ್ದು, ಅವಾಂತರ ಸೃಷ್ಟಿಸಿದೆ. ಸೇಬು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.

ಹೆಚ್ಚಿನ ಹಿಮಪಾತದಿಂದಾಗಿ ಪ್ರಮುಖ ರಸ್ತೆಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕಣಿವೆಯಲ್ಲಿ ವಿದ್ಯುತ್‌ ಸರಬರಾಜು ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ.

ಇನ್ನು ಸೇಬು ಮರಗಳ ಮೇಲೆ ಬಿಳಿಯ ಹೊದಿಕೆ ಹೊದಿಸಿದಂತೆ ದಪ್ಪನಾಗಿ ಹಿಮ ಬಿದ್ದಿದೆ. ಇದರಿಂದ ಸಾವಿರಾರು ಮರಗಳು ಭಾರವನ್ನು ತಾಳಲಾರದೆ ನೆಲಕ್ಕೊರಗುತ್ತಿವೆ. ಇದರಿಂದಾಗಿ ಸೇಬು ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.

ADVERTISEMENT

ಕಾಶ್ಮೀರದಲ್ಲಿ ಹಲವು ಮನೆಗಳಲ್ಲಿ ಎರಡು ದಿನಗಳಿಂದ ವಿದ್ಯುತ್‌ ಕಡಿತಗೊಂಡಿದೆ. ವಿದ್ಯಾರ್ಥಿಗಳು ಮೊಂಬತ್ತಿ ಬೆಳಕಿನಲ್ಲಿ ಪರೀಕ್ಷೆಗಳಿತೆ ತಯಾರಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ಆಸ್ಪತ್ರೆಗಳಿಗೂ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಮೊದಲ ಹಿಮಪಾತ ಆರಂಭವಾಗಿ 24 ತಾಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿರುವುದರಿಂದ ಶ್ರೀನಗರ ಮತ್ತಿತರ ಪ್ರದೇಶದಲ್ಲಿ ವಿದ್ಯುತ್‌ ಇಲ್ಲದಂತಾಗಿದೆ. ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಆಡಳಿತ ಪೂರ್ವ ಸಿದ್ಧತೆ ಮಾಡಿಲ್ಲ. ಇದರಿಂದ ಜನರು ಬೆಲೆ ತೆರುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಸೇಬಿನ ಮರಗಳು ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಬೆಳೆಗಾರರು ಮತ್ತಷ್ಟು ಆರ್ಥಿಕ ಕಷ್ಟ ಎದುರಿಸುವಂತಾಗಿದೆ ಎಂದು ಟ್ವಿಟ್‌ ಮಾಡಿರುವ ಒಮರ್‌ ಅಬ್ದುಲ್ಲಾ, ಸೇಬು ಬೆಳೆಗಾರರಿಗೆ ನೆರವಾಗುವಂತೆ ರಾಜ್ಯಪಾಲರು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕೋರಿದ್ದಾರೆ.

ಎರಡು ದಶಕದಲ್ಲಿ ನವೆಂಬರ್‌ನಲ್ಲಿ ನಾಲ್ಕು ಬಾರಿ ಹಿಮಪಾತವಾಗಿದೆ. 2004, 2008, 2009ರಲ್ಲಿ ನವೆಂಬರ್‌ನಲ್ಲಿ ಹಿಮಪಾತವಾಗಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಗುಲ್‌ಮಾರ್ಗ್‌ನಲ್ಲಿ ತಾಪಮಾನ ಕನಿಷ್ಠ 3 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಶ್ರೀನಗರದಲ್ಲಿ 1.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.