
ಉತ್ತರಾಖಂಡ: ಹಿಮಾಲಯ ಪರ್ವತಶ್ರೇಣಿಯಲ್ಲಿ ಬರುವ ರಾಜ್ಯ. ಚಾರ್ ಧಾಮ್ (ಯಮುನೋತ್ರಿ ಗಂಗೋತ್ರಿ, ಕೇದಾರನಾಥ, ಬದರಿನಾಥ), ರಿಷಿಕೇಶ, ಹರಿದ್ವಾರದಂತಹ ಪುಣ್ಯಕ್ಷೇತ್ರಗಳ ಮೂಲಕ ದೇವರ ನಾಡು ಎಂದು ಕರೆಸಿಕೊಳ್ಳುವ ಪ್ರದೇಶ. ನಯನ ಮನೋಹರ ಗಿರಿಧಾಮಗಳು, ದಟ್ಟಾರಣ್ಯ, ನದಿಗಳು ಇರುವುದರಿಂದ ಪ್ರವಾಸಿಗರು, ಸಾಹಸ ಕ್ರೀಡೆಗಳನ್ನು ಇಷ್ಟಪಡುವವರ ಸ್ವರ್ಗವೆಂದೇ ಕರೆಯಲಾಗುತ್ತಿದೆ.
ಪರಿಸರ ವೈವಿದ್ಯತೆಯಿಂದ ಗಮನ ಸೆಳೆಯುತ್ತಿದ್ದ ರಾಜ್ಯದಲ್ಲಿ ಇತ್ತೀಚೆಗೆ ಅಧಿಕ ಮಳೆ, ಮೇಘಸ್ಫೋಟ ಮುಂತಾದ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಅದರಲ್ಲೂ ಈಗ ಚಳಿಗಾಲದಲ್ಲೇ ಕಾಳ್ಗಿಚ್ಚುಗಳು ಕಾಣಿಸಿಕೊಳ್ಳುತ್ತಿದ್ದು, ಅರಣ್ಯವನ್ನು ನಾಮಾವಶೇಷ ಮಾಡುತ್ತಿವೆ.
ಒಂದು ಅಂದಾಜಿನ ಪ್ರಕಾರ ಉತ್ತರಾಖಂಡದಲ್ಲಿ ಈ ವರ್ಷ ಚಳಿಗಾಲದಲ್ಲೇ 1,600 ಕಾಳ್ಗಿಚ್ಚು ಸಂಭವಿಸಿವೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಹಿಮಾಲಯದ ತಪ್ಪಲಿನ ರಾಜ್ಯದ ಅರಣ್ಯ ಒಣಗಿ ಕಾಳ್ಗಿಚ್ಚಿಗೆ ಆಹುತಿಯಾಗುತ್ತಿದೆ. ಚಳಿಗಾಲದಲ್ಲಿ ವಾಡಿಕೆಯಷ್ಟು ಬೀಳದ ಹಿಮ, ಮಳೆ ಕೊರತೆಯಿಂದಾಗಿ ಶುಷ್ಕ ಹವಾಗುಣದಿಂದ ಈ ಪ್ರಾಕೃತಿಕ ವಿಕೋಪ ಸಂಭವಿಸುತ್ತಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, ಕಾಶ್ಮೀರ ಮತ್ತು ಲಡಾಕ್ ನಲ್ಲೇ ಹಿಮಪಾತದ ಪ್ರಮಾಣ ಕ್ರಮವಾಗಿ ಶೇ 70 ಮತ್ತು ಶೇ 40ರಷ್ಟು ಕುಸಿದಿದೆ.
ಈ ಪ್ರಕೃತಿಯ ಅವಸಾನದ ವಿರುದ್ಧ ಸೆಟೆದು ನಿಂತಿರುವ ಉತ್ತರಾಖಂಡದ ಅಪ್ಪ-ಮಗಳು 35 ವರ್ಷಗಳಲ್ಲಿ 70 ಸಾವಿರ ಗಿಡಗಳನ್ನು ನೆಟ್ಟು ಅವುಗಳ ಆರೈಕೆ ಮಾಡುವ ಮೂಲಕ ಹಿಮಾಚಲದ ಬಟಹರ್ ಅರಣ್ಯ ಪ್ರದೇಶವನ್ನು ಮತ್ತೆ ಹಚ್ಚ ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾರೆ ಎಂದು ಬೆಟರ್ ಇಂಡಿಯಾ ಜಾಲತಾಣದ ವರದಿ ತಿಳಿಸಿದೆ.
ದಟ್ಟ ಕಾನನದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಬೃಹತ್ ರಸ್ತೆ ಮಾರ್ಗಗಳು, ಮರ ಬೆಳೆಯುವ ಸಮಯಕ್ಕಿಂತ ವೇಗವಾಗಿ ಮರಗಳನ್ನು ಕಡಿಯುತ್ತಿರುವುದು, ಜನವಸತಿ, ರೆಸಾರ್ಟ್ ಇತ್ಯಾದಿ ನಗರ ಪ್ರದೇಶ ಹೆಚ್ಚಾಗಿದೆ. ಮರಗಿಡಗಳ ಸಂಖ್ಯೆ ಕುಸಿತವಾಗಿ ಕಾರ್ಬನ್ ವಾತಾವರಣದಲ್ಲೇ ಉಳಿದು ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗಿದೆ ಎನ್ನುತ್ತಾರೆ ತಜ್ಞರು.
ತೆಳುವಾದ ಅರಣ್ಯ, ಹೆಚ್ಚಾದ ಉಷ್ಣತೆ, ನದಿಗಳ ವೇಗ ಕೊಡುತ್ತಿರುವ ಸಂದೇಶವನ್ನು ಅರ್ಥ ಮಾಡಿಕೊಂಡ ಕಿಶನ್ ಲಾಲ್ ಸರ್ಕಾರದ ಯಾವುದೇ ಅನುಮತಿ ಮತ್ತು ಸಹಾಯಕ್ಕಾಗಿ ಕಾಯದೇ ಗಿಡ ನೆಡುವ ಕಾರ್ಯ ಆರಂಭಿಸಿದ್ದರು. ವರ್ಷದ ತಮ್ಮ ಸಂಪಾದನೆಯ ನಾಲ್ಕನೇ ಒಂದರಷ್ಟನ್ನು ಖರ್ಚು ಮಾಡಿ ಸಸಿಗಳನ್ನು ತಂದು ನೆಟ್ಟರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ತಂದೆಯ ಕಾರ್ಯಕ್ಕೆ ಹೆಗಲು ಕೊಟ್ಟ ಮಗಳು ಕಲ್ಪನಾ 3ನೇ ವಯಸ್ಸಿನಿಂದ ಪ್ರಕೃತಿ ಜೊತೆಗೆ ಬೆಳೆದು ದೊಡ್ಡವರಾಗಿದ್ದಾರೆ. ಪ್ರತಿ ಗಿಡಕ್ಕೂ ರಕ್ಷಾಬಂಧನದ ರೀತಿ ದಾರ ಕಟ್ಟಿ ಮರಗಿಡಗಳನ್ನು ಸಹೋದರರ ರೀತಿ ರಕ್ಷಣೆ ಮಾಡಿದ್ದಾರೆ. ಯಾವುದೇ ಪುರಸ್ಕಾರಕಲ್ಲದೇ ಸಮಯ ನಂಬಿ ಪ್ರಕೃತಿ ಉಳಿವಿಗಾಗಿ ಕಿಶನ್ ಲಾಲ್ ಶ್ರಮಿಸಿದ್ದಾರೆ.
ಹಿಮಾಲಯದ ಮಡಿಲಿನ ಅಸಮತೋಲನ ಎಷ್ಟರಮಟ್ಟಿಗೆ ಇದೇ ಎಂದರೆ. ಚಳಿಗಾಲದ ಹಿಮದ ಮೇಲೆ ಅವಲಂಬಿತವಾಗಿದ್ದ ಸೇಬಿನ ಮರಗಳ ರಕ್ಷಣೆಗೆ ರೈತರು ಈ ವರ್ಷ ಬೇರೆಡೆಯಿಂದ ಹಿಮವನ್ಬು ತಂದು ಸುರಿಯುತ್ತಿರುವ ದೃಶ್ಯಗಳನ್ನು ಕೆಲ ವಿಡಿಯೊಗಳಲ್ಲಿ ಕಾಣಬಹುದಾಗಿದೆ. ಪರಿಣತರು ಇದನ್ನು ‘ಹಿಮದ ಬರ‘ ಎಂದು ಕರೆದಿದ್ದಾರೆ.
ಹಿಮಪಾತವು ಹಿಮನದಿಗಳನ್ನು ನಿಧಾನವಾಗಿ ನಿಯಂತ್ರಿಸುತ್ತದೆ. ನದಿಗಳ ಹರಿವನ್ನು ನಿರ್ವಹಿಸುತ್ತದೆ. ಚಳಿಗಾಲ ಕಳೆದ ನಂತರವೂ ನೀರು ಸ್ಥಿರವಾಗಿ ಹರಿಯುವಂತೆ ನೋಡಿಕೊಳ್ಳುತ್ತದೆ. ಹಿಮವಿಲ್ಲದೆ, ಹಿಮನದಿಗಳು ವೇಗವಾಗಿ ಕರಗುತ್ತವೆ ಮತ್ತು ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ. ನಂತರ ಬೇಸಿಗೆ ಮುಗಿಯುವ ಮೊದಲೇ ಒಣಗುತ್ತವೆ.
ಈ ರೀತಿಯ ಅಸಮತೋಲನದಿಂದಾಗಿ, ಹೆಚ್ಚು ಅಗತ್ಯವಿರುವ ಬೇಸಿಗೆಯಲ್ಲಿ ನೀರು ಸಿಗುವುದಿಲ್ಲ. ನಗರಗಳು ಹೆಣಗಾಡುತ್ತವೆ. ಹೊಲ, ಗದ್ದೆಗಳು ಬಳಲುತ್ತವೆ. ಲಕ್ಷಾಂತರ ಜನರು ಇದರ ಪರಿಣಾಮವನ್ನು ಅನುಭವಿಸುತ್ತಾರೆ.
ಇದು ಕೇವಲ ಪರ್ವತದಲ್ಲಿ ಆಗುವ ಅಸಮತೋಲನ ಇಡೀ ಮಾನವಕುಲದ ಸಮಸ್ಯೆಯಾಗುತ್ತದೆ. ಕೂಡಲೇ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ದುರಂತ ಕಾದಿದೆ. ಒಂದು ಕುಟುಂಬ, ಅಪ್ಪ ಮಗಳು ಎಪ್ಪತ್ತು ಸಾವಿರ ಗಿಡ ನೆಟ್ಟು ಒಂದು ಪ್ರದೇಶದ ಅರಣ್ಯಕ್ಕೆ ಮರುಜೀವ ನೀಡಿದ್ದಾರೆ ಎಂದಾದರೆ ಇಡೀ ದೇಶದ ಜನ ಪಣತೊಟ್ಟರೆ ಪ್ರಕೃತಿ ಉಳಿವು ಸಾಧ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.