ADVERTISEMENT

ಗೊಗೊಯ್‌ಗೆ ಪಾಕ್‌ ನಂಟು: ಎಸ್‌ಐಟಿ ವರದಿ ಶೀಘ್ರ ಕೇಂದ್ರಕ್ಕೆ: ಹಿಮಂತ ಬಿಸ್ವ ಶರ್ಮಾ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 14:30 IST
Last Updated 11 ಫೆಬ್ರುವರಿ 2026, 14:30 IST
ಹಿಮಂತ ಬಿಸ್ವ ಶರ್ಮಾ
ಹಿಮಂತ ಬಿಸ್ವ ಶರ್ಮಾ   

ಗುವಾಹಟಿ (ಪಿಟಿಐ): ‘ಕಾಂಗ್ರೆಸ್‌ ಸಂಸದ ಗೌರವ್‌ ಗೊಗೊಯ್‌ ಅವರ ವಿರುದ್ಧದ ಪಾಕಿಸ್ತಾನ ನಂಟಿನ ಆರೋಪಕ್ಕೆ ಸಂಬಂಧಿಸಿದ ವಿಶೇಷ ತನಿಖಾ ತಂಡದ (ಎಸ್‌ಐಟಿ) ವರದಿಯನ್ನು ಹೆಚ್ಚಿನ ತನಿಖೆಗಾಗಿ ಕೇಂದ್ರಕ್ಕೆ ಕಳುಹಿಸಲಾಗುವುದು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಬುಧವಾರ ಹೇಳಿದ್ದಾರೆ.

ಪಾಕಿಸ್ತಾನದ ರಾವಲ್ಪಿಂಡಿಗೆ ಗೊಗೊಯ್‌ ಭೇಟಿ ನೀಡಿದ್ದನ್ನು ಸಹ ಎಸ್‌ಐಟಿ ವರದಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

‘ಪಾಕ್‌ ಭೇಟಿ ಕುರಿತಂತೆ ಇತ್ತೀಚೆಗಷ್ಟೇ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೊಗೊಯ್‌ ಮಾತನಾಡಿದ್ದರು. ಈ ವೇಳೆ ಗೊಗೊಯ್‌ ಅವರ ಪತ್ನಿ ಪಾಕಿಸ್ತಾನದಿಂದ ನೇರವಾಗಿ ವೇತನ ಪಡೆಯುತ್ತಿದ್ದರು ಮತ್ತು ವೀಸಾದಲ್ಲಿ ರಾವಲ್ಪಿಂಡಿ ಭೇಟಿಗೆ ಅವಕಾಶ ಇಲ್ಲದಿದ್ದರೂ ಪಾಕ್ ಸೇನಾ ಕೇಂದ್ರ ಕಚೇರಿ ಇರುವ ರಾವಲ್ಪಿಂಡಿಗೆ ಗೊಗೊಯ್‌ ಭೇಟಿ ನೀಡಿದ್ದರು ಎಂಬ ವಿಚಾರ ಬಹಿರಂಗಗೊಂಡಿದೆ. ಈ ಮಾಹಿತಿಯನ್ನು ವರದಿಯಲ್ಲಿ ಸೇರಿಸಲಾಗುವುದು’ ಎಂದೂ ಶರ್ಮಾ ತಿಳಿಸಿದ್ದಾರೆ. 

ADVERTISEMENT

ಎಲ್ಲಾ ಮಾಹಿತಿಗಳ ಸೇರ್ಪಡೆ ಬಳಿಕ ಶೀಘ್ರ ವರದಿಯನ್ನು ದೆಹಲಿಗೆ ಕಳುಹಿಸಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.

ಪ್ರಕರಣವನ್ನು ಕೇಂದ್ರ ಹೇಗೆ ಪರಿಗಣಿಸಲಿದೆ ಎಂಬ ಪ್ರಶ್ನೆಗೆ ಪತ್ರಿಕ್ರಿಯಿಸಿದ ಶರ್ಮಾ, ‘ಪಾಕಿಸ್ತಾನದ ವಿಚಾರ ಆಗಿರುವುದರಿಂದ ಯಾರೂ ಪ್ರಕರಣವನ್ನು ಸುಮ್ಮನೆ ಬಿಟ್ಟುಬಿಡುವುದಿಲ್ಲ. ಅಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಾತನಾಡುವ ವ್ಯಕ್ತಿಯಲ್ಲ, ಕೆಲಸವನ್ನು ಮಾಡಿ ತೋರಿಸುವ ವ್ಯಕ್ತಿ. ಅವರು ಮೌನವಾಗಿದ್ದಾರೆ ಎಂದರೆ ಅದು ಬಿರುಗಾಳಿ ಬೀಸುವ ಸೂಚನೆ’ ಎಂದೂ ಶರ್ಮಾ ಹೇಳಿದ್ದಾರೆ. 

ಚುನಾವಣೆ ಗಿಮಿಕ್‌ ಅಲ್ಲ: ‌

ಗೊಗೊಯ್‌ ಅವರ ಪಾಕಿಸ್ತಾನ ನಂಟಿನ ವಿಚಾರಕ್ಕೂ ಮುಂಬರಲಿರುವ ವಿಧಾನಸಭಾ ಚುನಾವಣೆಗೂ ಯಾವ ಸಂಬಂಧವೂ ಇಲ್ಲ ಎಂದು ಶರ್ಮಾ ಪ್ರತಿಪಾದಿಸಿದ್ದಾರೆ.

‘ಚುನಾವಣೆ ಗೆಲ್ಲಲು ಈ ವಿಚಾರದ ಅಗತ್ಯ ಇಲ್ಲ. ನಾವು ಈಗಾಗಲೇ ಬಹಳ ಮುಂದೆ ಇದ್ದೇವೆ. ಈ ಹೋರಾಟವೇನಿದ್ದರೂ ಅಸ್ಸಾಂಗೆ ಪಾಕಿಸ್ತಾನ ಹೆಜ್ಜೆ ಇಡದಂತೆ ತಡೆಯುವ ಪ್ರಯತ್ನವಷ್ಟೇ. ರಾಹುಲ್‌ ಗಾಂಧಿ ಎಂಥವರನ್ನು ಬೆಂಬಲಿಸುತ್ತಾರೆ ಎಂಬುದನ್ನು ನಾವು ಬಯಲಿಗೆಳೆದಿದ್ದೇವೆ’ ಎಂದೂ ಶರ್ಮಾ ಹೇಳಿದ್ದಾರೆ.

 ಜತೆಗೆ ‘ಕಾಂಗ್ರೆಸ್‌ನ ಕೆಲವು ಸದಸ್ಯರಿಗೂ ಗೊಗೊಯ್‌ ಅವರ ಪಾಕ್‌ ನಂಟಿನ ವಿಚಾರದ ಬಗ್ಗೆ ಅಸಮಾಧಾನವಿದೆ. ಪಾಕಿಸ್ತಾನವನ್ನು ಸೋಲಿಸಲು ರಾಜೀವ ಭವನ (ರಾಜ್ಯ ಕಾಂಗ್ರೆಸ್‌ ಕೇಂದ್ರ ಕಚೇರಿ) ಕೂಡ ನಮ್ಮೊಂದಿಗೆ ಕೆಲಸ ಮಾಡುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.