ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
ಗುವಹಾಟಿ: ‘ಸಂವಿಧಾನದ ಪ್ರಸ್ತಾವನೆಯಲ್ಲಿರುವ ‘ಸಮಾಜವಾದ‘ ಮತ್ತು ‘ಜಾತ್ಯತೀತ‘ ಪದಗಳು ಪಾಶ್ಚಾತ್ಯ ಪರಿಕಲ್ಪನೆಗಳಾಗಿದ್ದು, ಈ ಪದಗಳನ್ನು ಸಂವಿಧಾನದಿಂದ ತೆಗೆದುಹಾಕಬೇಕು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಹೇಳಿದ್ದಾರೆ.
‘ಈ ಎರಡು ಪದಗಳಿಗೆ ಭಾರತದ ನಾಗರಿಕತೆಯಲ್ಲಿ ಯಾವುದೇ ಜಾಗವಿಲ್ಲ. ಆದರೂ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಇವುಗಳನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿದ್ದಾರೆ. ನಾನೊಬ್ಬ ಕಟ್ಟರ್ ಹಿಂದೂ. ನಾನು ಹೇಗೆ ಜಾತ್ಯಾತೀತನಾಗಲಿ. ಮುಸ್ಲಿಂ ವ್ಯಕ್ತಿ ಕಟ್ಟರ್ ಮುಸ್ಲಿಂ ಆಗಿರುತ್ತಾರೆ. ಅವರು ಹೇಗೆ ಜಾತ್ಯಾತೀತರಾಗಿರಲು ಸಾಧ್ಯ’ ಎಂದು ಹಿಮಂತ್ ಪ್ರಶ್ನಿಸಿದ್ದಾರೆ.
‘ದಿ ಎಮರ್ಜೆನ್ಸಿ ಡೈರೀಸ್: ಇಯರ್ಸ್ ದಟ್ ಫೋರ್ಜ್ಡ್ ಎ ಲೀಡರ್’ ಎಂಬ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ಕೃತಿಯಲ್ಲಿ ತಾವು ಆರ್‌ಎಸ್‌ಎಸ್ ಪ್ರಚಾರಕರಾಗಿದ್ದ ಸಂದರ್ಭದಲ್ಲಿನ ಕೆಲವೊಂದು ದಾಖಲೆಗಳು, ನರೇಂದ್ರ ಮೋದಿ ಅವರೊಂದಿಗೆ ಮಾಡಿದ ಕೆಲಸಗಳನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. 1975ರಿಂದ 77ರವರೆಗಿನ ತುರ್ತುಪರಿಸ್ಥಿತಿ ಸಂದರ್ಭ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಇದರ ವಿರುದ್ಧ ನಡೆಸಿದ ಹೋರಾಟವನ್ನು ಉಲೇಖಿಸಲಾಗಿದೆ.
‘ಭಾರತದ ‘ಜಾತ್ಯಾತೀತ’ ಎಂಬ ಪದದ ಅರ್ಥ ತಟಸ್ಥವಾಗಿರುವುದಲ್ಲ. ಬದಲಿಗೆ ಸಕಾರಾತ್ಮವಾಗಿ ಆಲೋಚಿಸುವುದಾಗಿದೆ. ಆದರೆ ಜಾತ್ಯಾತೀತ ಪದವನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿದವರು ಪಾಶ್ಚಾತ್ಯ ದೃಷ್ಟಿಕೋನದಿಂದ ಭಾರತವನ್ನು ನೋಡಿದವರು. ಹೀಗಾಗಿ ಇದನ್ನು ಪ್ರಸ್ತಾವನೆಯಿಂದ ತೆಗೆದುಹಾಕಬೇಕು’ ಎಂದು ಹೇಳಿದ್ದಾರೆ.
‘ಸಂವಿಧಾನ ಪ್ರಸ್ತಾವನೆಯಲ್ಲಿರುವ ‘ಸಮಾಜವಾದ’ ಎಂಬ ಪದವೂ ಪಾಶ್ಚಾತ್ಯ ಪರಿಕಲ್ಪನೆಯಾಗಿದ್ದು, ಇದನ್ನು ಮಹಾತ್ಮಾ ಗಾಂಧಿ ಅವರಿಂದ ಪ್ರೇರಣೆ ಪಡೆದಿದ್ದಾಗಿದೆ. ಭಾರತದ ಆರ್ಥಿಕ ತತ್ವವು ಪಾಲುದಾರಿಕೆ ಮತ್ತು ನಿರ್ಗತಿಕರಿಗೆ ನೆರವಾಗುವುದೇ ಆಗಿದೆ. ಸಮಾಜವಾದಿ ಕಲ್ಪನೆಯನ್ನು ಬಿಜೆಪಿ ಕೆಡವುವ ಅಗತ್ಯವಿಲ್ಲ. ಆ ಕೆಲಸವನ್ನು ಪಿ.ವಿ. ನರಸಿಂಹರಾವ್ ಮತ್ತು ಮನಮೋಹನ ಸಿಂಗ್ ಅವರು ಉದಾರಿಕರಣದ ಮೂಲಕ ಈಗಾಗಲೇ ಮಾಡಿದ್ದಾರೆ’ ಎಂದು ಹಿಮಂತ ಬಿಸ್ವಾ ಶರ್ಮಾ ಟೀಕಿಸಿದ್ದಾರೆ.
‘ತುರ್ತು ಪರಿಸ್ಥಿತಿ ಭವಿಷ್ಯದಲ್ಲಿ ಎದುರಾಗಬಾರದು ಎಂದರೆ ತುರ್ತು ಪರಿಸ್ಥಿತಿಯನ್ನು ನಾವು ಮರೆಯಲೂ ಬಾರದು. 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ಭಾರತದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿತ್ತು. ಪತ್ರಿಕೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ವಿಚಾರಣೆ ಇಲ್ಲದೆ ಬಂಧಿಸಲಾಗುತ್ತಿತ್ತು. ಶಿಕ್ಷಣ, ನಾಗರಿಕ ಹಾಗೂ ಸಮಾಜದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿತ್ತು’ ಎಂದು ಬಿಸ್ವಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.