ADVERTISEMENT

ವಿದೇಶಿಯರಿಗೆ ಹಿಂದಿ ಕೋರ್ಸ್‌: ಐಸಿಸಿಆರ್‌ನಿಂದ ಶೇ. 70ರಷ್ಟು ಶುಲ್ಕ ವಿನಾಯಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2022, 4:12 IST
Last Updated 7 ನವೆಂಬರ್ 2022, 4:12 IST
   

ಬೆಂಗಳೂರು: ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯು (ಐಸಿಸಿಆರ್‌) ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಐಜಿಎನ್‌ಒಯು) ಮತ್ತು ಕೇಂದ್ರ ಹಿಂದಿ ನಿರ್ದೇಶನಾಲಯದ ಸಹಯೋಗದೊಂದಿಗೆ ವಿದೇಶಿ ಪ್ರಜೆಗಳಿಗಾಗಿ ಹಿಂದಿ ಕಲಿಸಲು ಇದೇ 16 ರಿಂದ ಆನ್‌ಲೈನ್‌ ತರಗತಿ ಆರಂಭಿಸುತ್ತಿದೆ.

ವಿದೇಶಿಯರಿಗೆ ಹಿಂದಿ ಜಾಗೃತಿಯ ಬೇಸಿಕ್‌ ಕೋರ್ಸ್ಅನ್ನು ಮೂರು ತಿಂಗಳು ಆನ್‌ಲೈನ್‌ ಮೂಲಕ ನಡೆಸಲಾಗುತ್ತಿದ್ದು, ವಾರಕ್ಕೆ ಎರಡು ದಿನ ತರಗತಿಗಳು ನಡೆಯಲಿವೆ ಎಂದು ಐಸಿಸಿಆರ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೇ, ತರಗತಿಯ ಒಟ್ಟು ಶುಲ್ಕದಲ್ಲಿ ಶೇಕಡ 70ರಷ್ಟನ್ನು ಐಸಿಸಿಆರ್‌ ಭರಿಸುತ್ತಿದೆ. ಇನ್ನುಳಿದ ಶೇ 30ರಷ್ಟನ್ನು ನೋಂದಣಿ ಮಾಡಿಕೊಂಡ ವಿದೇಶಿ ವಿದ್ಯಾರ್ಥಿಗಳೇ ಭರಿಸಲಿದ್ದಾರೆ.

ADVERTISEMENT

ಅರ್ಹ ವಿದ್ಯಾರ್ಥಿಗಳನ್ನು ನೋಂದಾಯಿಸುವ, ದಾಖಲಿಸಿಕೊಳ್ಳುವ, ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡುವ, ಪ್ರಮಾಣೀಕರಿಸುವ ಕೆಲಸವನ್ನು ಐಜಿಎನ್‌ಒಯು ಮಾಡಲಿದೆ. ತರಗತಿಗೆ ಬೇಕಾದ ಪೂರಕವಾದ ಸೌಕರ್ಯ ಒದಗಿಸುವ ಜವಾಬ್ದಾರಿಯನ್ನು ಕೇಂದ್ರ ಹಿಂದಿ ನಿರ್ದೇಶನಾಲಯ ಹೊತ್ತುಕೊಂಡಿದೆ.

ಥೈಲ್ಯಾಂಡ್, ಚೀನಾ, ಮಾರಿಷಸ್, ಇಂಡೋನೇಷ್ಯಾ, ವಿಯೆಟ್ನಾಂ, ಇರಾನ್, ತೈವಾನ್, ಫಿಲಿಪೈನ್ಸ್ ಮತ್ತು ರೊಮೇನಿಯಾದ 226 ವಿದ್ಯಾರ್ಥಿಗಳು ಹಿಂದಿ ತರಬೇತಿಗೆ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ವಿದೇಶದಲ್ಲಿ ಹಿಂದಿ ಭಾಷೆಯ ಹೆಚ್ಚಿನ ಪ್ರಚಾರಕ್ಕಾಗಿ ಈ ತರಗತಿಗಳನ್ನು ಆಯೋಜಿಸುತ್ತಿರುವುದಾಗಿ ಐಸಿಸಿಆರ್‌ ತಿಳಿಸಿದೆ.

ಹಿಂದಿ ಪ್ರಪಂಚದಲ್ಲಿ ಹೆಚ್ಚು ಮಾತನಾಡುವ ಮೂರನೇ ಭಾಷೆಯಾಗಿದೆ. ಭಾರತದ ಅಧಿಕೃತ ಭಾಷೆಗಳಲ್ಲಿ ಒಂದಾದ ಹಿಂದಿ, ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ. ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಈಗಾಗಲೇ ವಿದೇಶದಲ್ಲಿ ಹಿಂದಿ ಭಾಷೆಯ ಪ್ರಚಾರದಲ್ಲಿ ತೊಡಗಿರುವುದಾಗಿ ಐಸಿಸಿಆರ್‌ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.