ADVERTISEMENT

ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿದ ಕಮಲ್ ಹಾಸನ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 14:23 IST
Last Updated 16 ಸೆಪ್ಟೆಂಬರ್ 2019, 14:23 IST
   

ಚೆನ್ನೈ:ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿದ ನಟ, ರಾಜಕಾರಣಿ ಕಮಲ್ ಹಾಸನ್ ಗೃಹ ಸಚಿವಅಮಿತ್ ಶಾ ವಿರುದ್ಧ ಗುಡುಗಿದ್ದಾರೆ.
ಮಕ್ಕಳ್ ನೀತಿ ಮೈಯ್ಯಂ ಪಕ್ಷದ ನಾಯಕ ಕಮಲ್ ಹಾಸನ್, ಹಿಂದಿ ಬಗೆಗಿನ ಚರ್ಚೆ ಜಲ್ಲಿಕಟ್ಟು ಪ್ರತಿಭಟನೆಗಿಂತ ತೀವ್ರ ಸ್ವರೂಪ ಪಡೆಯಲಿದೆ ಎಂದು ಹೇಳಿದ್ದಾರೆ.

ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದಾಗ ವಿವಿಧತೆಯಲ್ಲಿ ಏಕತೆ ಎಂಬ ಭರವಸೆಯನ್ನು ನಾವು ಮಾಡಿದ್ದೆವು. ಈಗ ಯಾವುದೇ ಶಾ , ಸುಲ್ತಾನ್ ಅಥವಾ ಸಾಮ್ರಾಟ್ಈ ಭರವಸೆಯಿಂದ ಹಿಂದೆ ಸರಿಯುವಂತಿಲ್ಲ ಎಂದು ಕಮಲ್ ಹೇಳಿರುವ ವಿಡಿಯೊ ಟ್ವಿಟರ್‌ನಲ್ಲಿ ಶೇರ್ ಆಗಿದೆ.

ಶನಿವಾರ ಹಿಂದಿ ದಿವಸ್ ಆಚರಣೆ ವೇಳೆ ಮಾತನಾಡಿದ ಅಮಿತ್ ಶಾ, ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಪರಿಗಣಿಸುವ ಇಂಗಿತ ವ್ಯಕ್ತ ಪಡಿಸಿದ್ದರು. ಒಂದು ಭಾಷೆ ದೇಶವನ್ನು ಒಗ್ಗೂಡಿಸುತ್ತದೆ ಎಂದಿದ್ದರು ಅಮಿತ್ ಶಾ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಮಲ್, ಒಕ್ಕೂಟದ ಭಾರತವನ್ನು ಪ್ರತ್ಯೇಕ ಭಾರತವನ್ನಾಗಿ ಮಾಡಿದರೆ ನಾವೆಲ್ಲರೂ ಈ ಮುಠ್ಠಾಳತನದಿಂದ ಯಾತನೆ ಅನುಭವಿಸಬೇಕಾಗುತ್ತದೆ. ಹೆಚ್ಚಿನ ಜನರು ಹೆಮ್ಮೆಯಿಂದ ತಮ್ಮ ರಾಷ್ಟ್ರಗೀತೆಯನ್ನು ಹಾಡುತ್ತಾರೆ.ಅದು ಹೀಗೆ ಮುಂದುವರಿಯಲಿದೆ. ಕಾರಣ ರಾಷ್ಟ್ರಗೀತೆಯನ್ನು ಬರೆದ ಕವಿ ಎಲ್ಲ ಭಾಷೆಗಳಿಗೂ ಗೌರವ ನೀಡಿದ್ದರಿಂದಲೇ ಅದು ನಮ್ಮ ರಾಷ್ಟ್ರಗೀತೆಯಾಯಿತು ಎಂದಿದ್ದಾರೆ.

ಹಿಂದಿ ಹೇರಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದೇಶದಲ್ಲಿನ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಯೋಜಿತ ಪ್ರಯತ್ನ ಇದು ಎಂದು ಹೇಳಿದ್ದಾರೆ. ಅದೇ ವೇಳೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಅಮಿತ್ ಶಾ ಮನೆ ಮುರುಕ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.