ADVERTISEMENT

ಕೇಂದ್ರ ಗೃಹ ಸಚಿವ ಅಮಿತ್‌‌ ಶಾಗೆ ಕೋವಿಡ್‌ ದೃಢ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 13:13 IST
Last Updated 2 ಆಗಸ್ಟ್ 2020, 13:13 IST
ಅಮಿತ್‌ ಶಾ
ಅಮಿತ್‌ ಶಾ    

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೊರೊನಾ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ.

ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಕೊರೊನಾದ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಪರೀಕ್ಷೆಮಾಡಿಸಿಕೊಂಡಿದ್ದೇನೆ. ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ನನ್ನ ಆರೋಗ್ಯ ಚೆನ್ನಾಗಿದೆ. ಆದರೆ, ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ.ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದ ನೀವೆಲ್ಲರೂದಯವಿಟ್ಟು ಪರೀಕ್ಷೆಮಾಡಿಸಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಮಿತ್‌ ಶಾ ಭಾಗವಹಿಸಿದ್ದರು. ಅವರ ಸಂಪರ್ಕಕ್ಕೆ ಬಂದಿರುವ ಸಚಿವರನ್ನು ಪತ್ತೆ ಹಚ್ಚಿ, ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ ಎಂದು ಮೂಲಗಳ ತಿಳಿಸಿವೆ.

ADVERTISEMENT

ಆಗಸ್ಟ್ 1 ರಂದು ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕ್ ಜನ್ಮದಿನದ ಪ್ರಯುಕ್ತ ಭಾರತೀಯ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಏರ್ಪಡಿಸಿದ್ದ ಆನ್‌ಲೈನ್ ಸಮಾವೇಶದಲ್ಲಿ ಶಾ ಅವರು ಭಾಗವಹಿಸಿ ಮಾತನಾಡಿದ್ದರು.

ಮೂರು ದಿನಗಳ ಹಿಂದೆ ದೇಶಕ್ಕೆ ಆಗಮಿಸಿದ ರಫೇಲ್ ಯುದ್ಧ ವಿಮಾನಗಳನ್ನು ಅಮಿತ್‌ ಶಾ ಸ್ವಾಗತಿಸಿದ್ದರು.

ಅಮಿತ್‌ ಶಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ವಿಚಾರ ತಿಳಿದ ಹಿನ್ನೆಲೆಯಲ್ಲಿಟ್ವೀಟ್‌ ಮಾಡಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕೇಂದ್ರ ಗೃಹ ಸಚಿವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿರುವುದಾಗಿ ಹೇಳಿದ್ದಾರೆ.

ಅಮಿತ್ ಷಾ ಅವರ ತಪಾಸನೆ ನಡೆಸಲು ದೆಹಲಿಯ ಏಮ್ಸ್ ನಿರ್ದೇಶಕ ಡಾ.ರಣದೀಪ್‌ ಗುಲೇರಿಯಾ ನೇತೃತ್ವದ ವೈದ್ಯರ ತಂಡವು ಗುರುಗ್ರಾಮದಲ್ಲಿರುವ ಮೆಡಂತ ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆಯಿದೆ ಇದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕಳೆದ ವಾರ ಕೋವಿಡ್‌ ದೃಢಪಟ್ಟಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.