ಲಖನೌ: ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಯುವತಿಯ ಕುಟುಂಬದವರು ಆಕೆ ಮತ್ತು ಆಕೆಯ ಪ್ರಿಯಕರನನ್ನು ಥಳಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಟಾ ಜಿಲ್ಲೆಯ ಸುಹಾಗ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಶಿವಾನಿ ಮತ್ತು ದೀಪಕ್ ಇಬ್ಬರು ಒಂದೇ ಗ್ರಾಮ ಮತ್ತು ಒಂದೇ ಸಮುದಾಯದವರಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾತ್ರಿ 8.30 ಸುಮಾರಿಗೆ ದೀಪಕ್, ಶಿವಾನಿಯನ್ನು ಭೇಟಿಯಾಗಲು ಆಕೆಯ ಮನೆಗೆ ತೆರಳಿದ್ದನು. ಇವರಿಬ್ಬರು ಟೆರೇಸ್‌ನಲ್ಲಿ ಏಕಾಂತದಲ್ಲಿದ್ದರು. ಇದನ್ನು ನೋಡಿದ ಶಿವಾನಿಯ ಕುಟುಂಬದವರು ಕೋಪಕೊಂಡು ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಶಿವಾನಿ ಸ್ಥಳದಲ್ಲೇ ಮೃತಪಟ್ಟರೆ, ದೀಪಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಎಸ್‌ಎಸ್‌ಪಿ ಶ್ಯಾಮ್ ನಾರಾಯಣ್ ಸಿಂಗ್ ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಟಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎರಡು ಕುಟುಂಬದವರು ಈವರೆಗೆ ಯಾವುದೇ ದೂರು ದಾಖಲಿಸಿಲ್ಲ ಎಂದೂ ಸ್ಥಳೀಯ ಎಸ್‌ಎಚ್‌ಒ ರಿತೇಶ್ ಠಾಕೂರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.