ADVERTISEMENT

ಹೊಸೂರು ವಿಮಾನ ನಿಲ್ದಾಣ– ವಾಯುಪ್ರದೇಶ ಮರುಪರಿಶೀಲಿಸಿ: ಕೇಂದ್ರ ಸರ್ಕಾರಕ್ಕೆ ಮನವಿ

ಕೇಂದ್ರ ಸರ್ಕಾರಕ್ಕೆ ಮತ್ತೆ ಪತ್ರ ಬರೆಯಲು ನಿರ್ಧರಿಸಿದ ತಮಿಳುನಾಡು ಸರ್ಕಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 22:39 IST
Last Updated 16 ಫೆಬ್ರುವರಿ 2026, 22:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಹೊಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣ ಸಂಬಂಧ ವಾಯುಪ್ರದೇಶವನ್ನು ಒದಗಿಸುವ ಕುರಿತು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. 

ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ಟಿಡ್ಕೊ) ಯೋಜನೆಗೆ ಸ್ಥಳ ಅನುಮತಿ ಕೋರಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಕಳೆದ ವಾರ ರಾಜ್ಯಸಭೆಯಲ್ಲಿ ಉತ್ತರಿಸಿದ್ದ ಸಚಿವರು, ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್‌) ಕೈಗೆತ್ತಿಕೊಳ್ಳುತ್ತಿರುವ ಪ್ರಮುಖ ರಕ್ಷಣಾ ಯೋಜನೆಗಳ ವಾಯುಪ್ರದೇಶದ ಅಗತ್ಯತೆ ಗಮನದಲ್ಲಿರಿಸಿಕೊಂಡು, ಹೊಸೂರಿನಲ್ಲಿ ವಾಯು‍ಪ್ರದೇಶ ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದರು.

ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.

ADVERTISEMENT

‘ಹೊಸೂರಿನಲ್ಲಿ ವಿಮಾನ ನಿಲ್ದಾಣ ಅಗತ್ಯತೆ ಕುರಿತು ಕೇಂದ್ರ ಸರ್ಕಾರಕ್ಕೆ ವಿವರಣೆ ನೀಡಲಿದ್ದೇವೆ. ನಿಲ್ದಾಣ ನಿರ್ಮಾಣದಿಂದ ಹೊಸೂರು ಮಾತ್ರವಲ್ಲದೇ, ದಕ್ಷಿಣ ಬೆಂಗಳೂರಿಗೂ ನೆರವಾಗಲಿದೆ. ಈಗಿರುವ ವಾಯುಪ್ರದೇಶವನ್ನು ಎಚ್‌ಎಎಲ್‌ ಜೊತೆಗೂ ಹಂಚಿಕೊಳ್ಳುವ ಕುರಿತು ವಿವರವಾದ ಮಾಹಿತಿ ನೀಡಲಿದ್ದೇವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನೂತನ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಹೊಸೂರು ತಾಲ್ಲೂಕಿನ 12 ಕಂದಾಯ ಗ್ರಾಮ, ಕೃಷ್ಣಗಿರಿ ಜಿಲ್ಲೆಯ ಶೂಲಗಿರಿ ಗ್ರಾಮದ 3 ಸಾವಿರ ಏಕರೆ ಭೂಮಿಯನ್ನು ಈಗಾಗಲೇ ಗುರುತಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.