ADVERTISEMENT

ತಿಹಾರ್‌ ಜೈಲಿನಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ದಿನಚರಿ ಹೇಗಿದೆ?

ಪಿಟಿಐ
Published 4 ಏಪ್ರಿಲ್ 2024, 13:41 IST
Last Updated 4 ಏಪ್ರಿಲ್ 2024, 13:41 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿಯಿಂದ ಬಂಧಿತರಾಗಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರನ್ನು ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏಷ್ಯಾದ ಅತಿದೊಡ್ಡ ತಿಹಾರ್‌ ಜೈಲಿನಲ್ಲಿರುವ ಮೊದಲ ಹಾಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರ ದಿನಚರಿ ಹೇಗಿದೆ?.

ತಿಹಾರ್‌ ಜೈಲು ಸಂಖ್ಯೆ 2, ಜನರಲ್ ವಾರ್ಡ್‌ ಸಂಖ್ಯೆ 3, 14x8 ವಿಸ್ತೀರ್ಣದ ಕೋಣೆಯಲ್ಲಿ ಕೇಜ್ರಿವಾಲ್ ಇದ್ದಾರೆ.

ADVERTISEMENT

ಅರವಿಂದ ಕೇಜ್ರಿವಾಲ್‌ ಅವರು ದಿನದ ಬಹುಪಾಲು ಸಮಯವನ್ನು ಪುಸ್ತಕಗಳನ್ನು ಓದುವುದರಲ್ಲಿಯೇ ಕಳೆಯುತ್ತಾರೆ. ಪ್ರತಿದಿನ ಎರಡು ಬಾರಿ ಬೆಳಿಗ್ಗೆ ಮತ್ತು ಸಂಜೆ ಸುಮಾರು ಒಂದೂವರೆ ಗಂಟೆಗಳ ಕಾಲ ಯೋಗ ಹಾಗೂ ಧ್ಯಾನ ಮಾಡುತ್ತಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ಅವರಿಗೆ ನೀಡಲಾಗಿರುವ ಪುಸ್ತಕಗಳಲ್ಲಿ ಹಿಂದೂ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಹಾಗೂ 'ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್' ಪುಸ್ತಕಗಳು ಸೇರಿವೆ.

ಕೈದಿಗಳಿಗೆ ಲಭ್ಯವಿರುವ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಅವರು ಓದಬಹುದು. ಆದರೆ ಈವರೆಗೂ ಅವರು (ಕೇಜ್ರಿವಾಲ್‌) ಬೇರೆ ಪುಸ್ತಕಗಳನ್ನು ಕೇಳಿಲ್ಲ. ಕೇಜ್ರಿವಾಲ್‌ ಇರುವ ಕೊಠಡಿಯಲ್ಲಿ 20 ಚಾನೆಲ್‌ ಒಳಗೊಂಡ ಟಿ.ವಿಯೊಂದನ್ನು ಇರಿಸಲಾಗಿದೆ. ಆದರೆ ಅವರು ಟಿ.ವಿ ವೀಕ್ಷಿಸಲು ಹೆಚ್ಚಿನದಾಗಿ ಇಷ್ಟಪಡುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನ್ಯಾಯಾಲಯದ ನಿರ್ದೇಶನದಂತೆ ಟೇಬಲ್‌, ಕುರ್ಚಿ ಹಾಗೂ ಎಲೆಕ್ಟ್ರಿಕ್‌ ಕೆಟಲ್‌ ಅನ್ನು ಅವರಿಗೆ ಒದಗಿಸಲಾಗಿದೆ. ಜೈಲಿನ ನಿಯಮದ ಪ್ರಕಾರ ಸಾಮಾನ್ಯ ಖೈದಿಗಳ ಕೊಠಡಿಗೆ ನೀಡುವಂತೆ ಪೊರಕೆ, ಬಕೆಟ್‌ ಹಾಗೂ ಕೊಠಡಿ ಸ್ವಚ್ಫಗೊಳಿಸಲು ತುಂಡು ಬಟ್ಟೆಯನ್ನು ಕೇಜ್ರಿವಾಲ್‌ ಇರುವ ಸೆಲ್‌ಗೂ ನೀಡಲಾಗಿದೆ ಎನ್ನಲಾಗಿದೆ.

ಭದ್ರತಾ ದೃಷ್ಟಿಯಿಂದಾಗಿ ಕೇಜ್ರಿವಾಲ್‌ಗೆ ಇತರ ಕೈದಿಗಳನ್ನು ಭೇಟಿಯಾಗಲು ಅವಕಾಶವಿಲ್ಲ . ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ತಮಿಳುನಾಡು ವಿಶೇಷ ಪೊಲೀಸ್ ಸಿಬ್ಬಂದಿಯನ್ನು ಕೇಜ್ರಿವಾಲ್‌ ಇರುವ ಕೊಠಡಿಯ ಹೊರ ಭಾಗದಲ್ಲಿ ನಿಯೋಜಿಸಲಾಗಿದೆ.

ಕೇಜ್ರಿವಾಲ್‌ ತಮ್ಮ ವಕೀಲರನ್ನು ಭೇಟಿ ಮಾಡಲು ಹೋಗುವಾಗ ಅವರೊಂದಿಗೆ ವಿಶೇಷ ಪೊಲೀಸ್‌ ಸಿಬ್ಬಂದಿಯೂ ಅವರ ಬೆಂಗಾವಲಾಗಿ ಇರುತ್ತಾರೆ. ದಿನನಿತ್ಯ ಸಮಯಕ್ಕೆ ಸರಿಯಾಗಿ ಚಹಾ ಮತ್ತು ಮನೆಯಲ್ಲಿ ತಯಾರಿಸಿದ ಊಟವನ್ನು ನೀಡಲಾಗುತ್ತಿದೆ. ಕೇಜ್ರಿವಾಲ್ ಸದ್ಯಕ್ಕೆ ಬೇರೇನೂ ಬೇಡಿಕೆ ಇಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.