ADVERTISEMENT

ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತ: ಭೀಕರತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿಗಳು

ಏಜೆನ್ಸೀಸ್
Published 29 ಜನವರಿ 2025, 11:34 IST
Last Updated 29 ಜನವರಿ 2025, 11:34 IST
<div class="paragraphs"><p>ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿದ ದೃಶ್ಯಗಳು</p></div>

ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿದ ದೃಶ್ಯಗಳು

   

ಪಿಟಿಐ ಚಿತ್ರಗಳು

ಲಖನೌ: ಚೆಲ್ಲಾಪಿಲ್ಲಿಯಾಗಿ ಬಿದ್ದ ಬಟ್ಟೆಗಳು, ಬ್ಯಾಗ್‌ಗಳು, ಕಸದ ರಾಶಿ...ಹೀಗೆ ಬುಧವಾರ ಬೆಳಗಿನ ಜಾವದಲ್ಲಿ ಭಯಾನಕ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ.

ADVERTISEMENT

ಹಿಂದೂಗಳಿಗೆ ಪುಣ್ಯ ದಿನವಾದ ಮೌನಿ ಅಮಾವಾಸ್ಯೆಯಂದು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಗಂಗಾ, ಯಮುನಾ, ಮತ್ತು ಪೌರಾಣಿಕದ ಸರಸ್ವತಿ ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಳ್ಳಲು ಕೋಟ್ಯಂತರ ಜನ ಆಗಮಿಸಿದ್ದರು. ಭದ್ರತಾ ವ್ಯವಸ್ಥೆಗಳ ನಡುವೆಯೂ ಸಂಭವಿಸಿದ ಕಾಲ್ತುಳಿತ ಹಲವು ಭಕ್ತರ ಪ್ರಾಣವನ್ನೇ ಕಸಿದಿದೆ.

ಪ್ರತ್ಯಕ್ಷದರ್ಶಿಯಾದ ಬಿಹಾರ ಮೂಲದ ರೇಖಾ ದೇವಿ ಎನ್ನುವವರು ಅಲ್ಲಿನ ಘಟನೆಯನ್ನು ವಿವರಿಸುತ್ತಾ, ‘ಅಮೃತಸ್ನಾನಕ್ಕೆ ಬೆಳಗಿನ ಜಾವ 3 ಗಂಟೆಗೆ ಸಮಯ ನಿಗದಿಯಾಗಿತ್ತು. ಹೀಗಾಗಿ ಬೆಳಗಿನ ಜಾವವೇ ಸ್ನಾನ ಮಾಡಬೇಕೆಂದು ಸಂಗಮದ ಬಳಿಯೇ ಹಲವರು ಮಲಗಿದ್ದರು. ಆದರೆ ಮಧ್ಯರಾತ್ರಿ 2 ಗಂಟೆಯ ಹೊತ್ತಿಗೆ ಏಕಾಏಕಿ 157ನೇ ಪಿಲ್ಲರ್‌ ಬಳಿ ಬಂದ ಜನರ ಗುಂಪು ಬ್ಯಾರಿಕೇಡ್‌ಗಳನ್ನು ತಳ್ಳಿ ಸಂಗಮದತ್ತ ನುಗ್ಗಿದ್ದು ಭಾರಿ ಜನಸಂದಣಿಗೆ ಕಾರಣವಾಗಿತ್ತು. ಆತಂಕಗೊಂಡು ಅಲ್ಲಿದ್ದ ಕೆಲವರು ಓಡಲಾರಂಭಿಸಿದ್ದಾರೆ. ಈ ವೇಳೆ ಕೆಳಕ್ಕೆ ಬಿದ್ದವರು ಏಳಲೇ ಇಲ್ಲ. ಅಲ್ಲಿನ ದೃಶ್ಯಗಳು ಭಯಾನಕವಾಗಿತ್ತು’ ಎಂದಿರುವುದಾಗಿ ಮನಿ ಕಂಟ್ರೋಲ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಉತ್ತರ ಪ್ರದೇಶದ ಸಂತ ಕಬೀರ್‌ ನಗರದ ಶ್ವೇತಾ ತ್ರಿಪಾಠಿ ಎನ್ನುವವರು ಕಾಲ್ತುಳಿತದ ದೃಶ್ಯಗಳನ್ನು ವಿವರಿಸುತ್ತಾ. ‘ಸುರಕ್ಷಿತ ಜಾಗಕ್ಕೆ ಸೇರಬೇಕೆಂದು ಒಬ್ಬರ ಮೇಲೊಬ್ಬರು ಬೀಳುತ್ತಿದ್ದರು. ನಾವು ಹೋಗುವಷ್ಟರಲ್ಲಿ, ಅಲ್ಲಲ್ಲಿ ಬಿದ್ದಿದ್ದ ಬಟ್ಟೆಗಳು, ಜನರ ಶವ, ಅವರ ಬ್ಯಾಗ್‌ಗಳು, ಸುತ್ತಲೂ ಕಸದ ರಾಶಿ ಕಣ್ಣಿಗೆ ರಾಚುತ್ತಿತ್ತು. ನಿಮಿಷಗಳ ಅಂತರದಲ್ಲಿ ಎಲ್ಲವೂ ನಡೆದು ಹೋಗಿತ್ತು. ಒಬ್ಬ ಮಹಿಳೆ ಮತ್ತು ಮಗು ಅವರ ಕುಟುಂಬ ಸದಸ್ಯರೊಬ್ಬರ ಶವದ ಎದುರು ಕುಳಿತು ಅಳುತ್ತಿದ್ದರು. ಅಲ್ಲಿನ ದೃಶ್ಯಗಳನ್ನು ಕಂಡು ಅಳು ತಡೆಯಲಾಗಲಿಲ್ಲ. ನಾನು ವಾಪಸ್‌ ಬರುತ್ತೇನೆ ಎಂದುಕೊಂಡಿರಲಿಲ್ಲ. ಅದೃಷ್ಟವಶಾತ್‌ ನನ್ನ ಕುಟುಂಬದ ಎಲ್ಲರೂ ಸುರಕ್ಷಿತರಾಗಿದ್ದಾರೆ’ ಎಂದಿರುವುದಾಗಿ ರಾಯಿಟರ್ಸ್‌ ವರದಿ ತಿಳಿಸಿದೆ.

‘ಒಂದೆಡೆ ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಂಡು ವಾಪಸಾಗುತ್ತಿದ್ದ ಜನರ ಗುಂಪು, ಇನ್ನೊಂದೆಡೆ ನೀರಿಗೆ ಇಳಿಯುವವರ ಗುಂಪು ಇವೆಲ್ಲದರಿಂದ ಜನಸಂದಣಿ ಉಂಟಾಗಿತ್ತು. ಮಹಿಳೆಯರ ಗುಂಪೊಂದು ನದಿಗೆ ಇಳಿದು ಸ್ನಾನ ಮುಗಿಸಿ ವಾಪಸಾಗುತ್ತಿದ್ದ ವೇಳೆ ನೂಕುನುಗ್ಗಲಿನಿಂದಾಗಿ ನೀರಿಗೆ ಬಿದ್ದಿದ್ದರು. ತಕ್ಷಣವೇ ಅಲ್ಲಿದ್ದವರು ಮಹಿಳೆಯರನ್ನು ರಕ್ಷಿಸಿದ್ದಾರೆ’ ಎಂದು ಪ್ರತ್ಯಕ್ಷದರ್ಶಿ ಅಭಿಷೇಕ್‌ ಕುಮಾರ್‌ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.