ADVERTISEMENT

ಅಂಗಾಂಗ ಕಸಿಗಾಗಿ ಇರಾನ್‌ಗೆ ಮಾನವ ಕಳ್ಳ ಸಾಗಣೆ: ಕೇರಳ ಹೆಲ್ತ್ ಕ್ಲಬ್‌ ಮೇಲೆ ತನಿಖೆ

ಕರ್ನಾಟಕ, ಆಂಧ್ರ, ತೆಲಂಗಾಣದವರೇ ಹೆಚ್ಚು; ನ್ಯಾಯಾಲಯಕ್ಕೆ ಎನ್‌ಐಎ ಪ್ರಮಾಣಪತ್ರ

ಪಿಟಿಐ
Published 20 ನವೆಂಬರ್ 2025, 13:30 IST
Last Updated 20 ನವೆಂಬರ್ 2025, 13:30 IST
   

ಕೊಚ್ಚಿ: ಅಂಗಾಂಗಗಳ ಅಕ್ರಮ ಕಸಿಗಾಗಿ ಇರಾನ್‌ಗೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಆರೋಪಿಗಳು ಆರಂಭಿಸಿದ್ದ ಕೇರಳದ ಹೆಲ್ತ್‌ ಕ್ಲಬ್‌ವೊಂದರ ಚಟುವಟಿಕೆಗಳನ್ನೂ ತನಿಖೆಗೆ ಒಳಪಡಿಸಿದೆ. ನ್ಯಾಯಾಲಯಕ್ಕೆ ತನಿಖಾ ಸಂಸ್ಥೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಈ ಅಂಶ ಬಹಿರಂಗವಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಪಲಾರಿವಟ್ಟಂನ ಮಧು ಜಯಕುಮಾರ್‌ ಅವರನ್ನು ಮತ್ತೆ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಎನ್‌ಐಎ ಕೋರಿತು. ‘ಜಯಕುಮಾರ್ ಮತ್ತು ಮೂವರು ಆರೋಪಿಗಳು ಸೌತ್‌ ಇಂಡಿಯನ್‌ ಬ್ಯಾಂಕ್‌ನಲ್ಲಿ ಸ್ಟೆಮ್ಮಾ ಕ್ಲಬ್‌ ಹೆಸರಿನಲ್ಲಿರುವ ಖಾತೆಯ ಮೂಲಕ ಹಣ ಸಂಗ್ರಹಿಸುತ್ತಿದ್ದರು’ ಎಂದು ಪ್ರಮಾಣ ಪತ್ರದಲ್ಲಿ ಎನ್‌ಐಎ ತಿಳಿಸಿದೆ.

ಇರಾನ್‌ನಲ್ಲಿ ಉಳಿದುಕೊಂಡಿದ್ದ ಜಯಕುಮಾರ್‌ ನವೆಂಬರ್‌ 7ರಂದು ಭಾರತಕ್ಕೆ ಮರಳಿದ್ದಾಗ ಬಂಧಿಸಲಾಗಿತ್ತು. ನವೆಂಬರ್‌ 19ರವರೆಗೆ ನ್ಯಾಯಾಲಯ ಎನ್‌ಐಎ ವಶಕ್ಕೆ ನೀಡಿತ್ತು.

ADVERTISEMENT

‘ಭಾರತದಿಂದ ಇರಾನ್‌ಗೆ ಮಾನವ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಗಳು, ಆರಂಭದಲ್ಲಿ ಹಣ ನೀಡಿ ಅಂಗಾಂಗ ಕಸಿಯುತ್ತಿದ್ದರು. ಆನಂತರ ಬೆದರಿಕೆ ಕ್ರಮ ಅನುಸರಿಸುತ್ತಿದ್ದರು. ಕಳ್ಳಸಾಗಣೆಯಾದವರು ಜೀವಬೆದರಿಕೆ ಕಾರಣಕ್ಕೆ ಬಲವಂತದಿಂದ ಮೂತ್ರಪಿಂಡಗಳನ್ನು ನೀಡುತ್ತಿದ್ದರು. ಆರೋಪಿಗಳು ಈ ಮೂಲಕ ಅಪಾರ ಹಣ ಸಂಗ್ರಹಿಸಿದ್ದಾರೆ. ನಗದು, ಕ್ರಿಪ್ಟೋ ಮತ್ತು ಜಮೀನು ರೂಪದಲ್ಲಿ ಆಸ್ತಿ ಮಾಡಿದ್ದಾರೆ’ ಎಂದು ಪ್ರಮಾಣ ಪತ್ರದಲ್ಲಿ ಎನ್‌ಐಎ ತಿಳಿಸಿದೆ.

ಕರ್ನಾಟಕದವರೂ ಇದ್ದಾರೆ:

‘ಮಾನವ ಕಳ್ಳಸಾಗಣೆ ಆದವರಲ್ಲಿ ತೆಲಂಗಾಣ, ಕರ್ನಾಟಕ ಮತ್ತು ಆಂಧ್ರಪ್ರದೇಶದವರೇ ಹೆಚ್ಚು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಉತ್ತರ ಭಾರತದ ಹಲವು ರಾಜ್ಯಗಳವರು ಅಂಗಾಂಗ ಪಡೆದಿದ್ದಾರೆ. ಪ್ರತಿ ಅಂಗ ಕಸಿಗೆ ಆರೋಪಿಗಳು ₹50 ಲಕ್ಷ ಪಡೆದಿದ್ದಾರೆ’ ಎಂದು ನ್ಯಾಯಾಲಯಕ್ಕೆ ಎನ್‌ಐಎ ಮಾಹಿತಿ ನೀಡಿದೆ.

‘ಅಂತರರಾಷ್ಟ್ರೀಯ ಅಂಗಾಂಗ ವ್ಯಾಪಾರದ ‘ಕಿಂಗ್‌ಪಿನ್‌’ ಮಧು ಜಯಕುಮಾರ್. ಈತ ಕೊಚ್ಚಿಯಲ್ಲಿರುವ ಸ್ಟೆಮ್ಮಾ ಕ್ಲಬ್‌ ಎಂಬ ಹೆಲ್ತ್‌ ಕ್ಲಬ್ ನಡೆಸುತ್ತಿದ್ದ. ಇತರೆ ಆರೋಪಿಗಳಾದ ತ್ರಿಶ್ಶೂರ್‌ನ ಸಬಿತ್‌ ನಾಸರ್‌ ಮತ್ತು ಕಲಮಶ್ಶೇರಿಯ ಸಜ್ಜಿತ್‌ ಶ್ಯಾಮ್‌ ಈತನಿಗೆ ಸಹಕರಿಸುತ್ತಿದ್ದರು’ ಎಂದು ಎನ್‌ಐಎ ತಿಳಿಸಿದೆ. 

ಆರೋಪಿಗಳು ಇರಾನ್‌ನಲ್ಲಿನ ಅಂಗಾಂಗ ವ್ಯಾಪಾರ ಕೇಂದ್ರಕ್ಕೆ ಹಣ ವರ್ಗಾಯಿಸಲು ಬಳಸುತ್ತಿದ್ದ ಎಸ್‌ಐಬಿ ಖಾತೆ, ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಸಬಿತ್‌ ನಿರ್ವಹಿಸುತ್ತಿದ್ದ ಬ್ಯಾಂಕ್‌ ಖಾತೆಯಲ್ಲಿ ₹ 6 ಕೋಟಿ ವಹಿವಾಟು ನಡೆದಿರುವುದು ಪತ್ತೆಯಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಮುಖ್ಯಾಂಶಗಳು:
  • ಭಾರತದಿಂದ ಇರಾನ್‌ಗೆ ಮಾನವ ಕಳ್ಳಸಾಗಣೆ

  • ಹಣದ ಆಮಿಷ, ಜೀವಬೆದರಿಕೆ ಮೂಲಕ ಅಂಗಾಂಗ ಕಳವು

  • ಪ್ರತಿ ಅಂಗಾಂಗ ಕಸಿಗೆ ₹ 25 ಲಕ್ಷ ಪಡೆಯುತ್ತಿದ್ದ ಜಾಲ

  • ತೆಲಂಗಾಣ, ಕರ್ನಾಟಕ, ಆಂಧ್ರದವರ ಕಳ್ಳಸಾಗಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.