ADVERTISEMENT

ನಮಗೆ ರಾಜ್ಯ ಸ್ಥಾನಮಾನ ನೀಡಲೇಬೇಕು: ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ

ಪಿಟಿಐ
Published 20 ಜುಲೈ 2025, 14:56 IST
Last Updated 20 ಜುಲೈ 2025, 14:56 IST
ಒಮರ್‌ 
ಒಮರ್‌    

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲೇಬೇಕು. ಇದು ನಮ್ಮ ಹಕ್ಕು. ಇದನ್ನು ಪಡೆದುಕೊಳ್ಳಲು ಕಾನೂನು ಹೋರಾಟ ಸೇರಿ ಇದಕ್ಕೆ ಬೇಕಿರುವ ಎಲ್ಲ ಇತರೆ ದಾರಿಗಳ ಬಗ್ಗೆಯೂ ಚರ್ಚಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಹೇಳಿದರು.

ಪಿಟಿಐ ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಅವರು ಮಾತನಾಡಿದರು.

‘ರಾಜ್ಯ ಸ್ಥಾನಮಾನ ನೀಡುತ್ತೇವೆ ಎಂದು ಸಂಸತ್ತಿನಲ್ಲಿ, ಸುಪ್ರೀಂ ಕೋರ್ಟ್‌ನಲ್ಲಿ ಹಲವು ಬಾರಿ ಭರವಸೆ ನೀಡಲಾಗಿದೆ. ಆದರೂ ಈವರೆಗೂ ಈ ಕೆಲಸ ಆಗಿಲ್ಲ. ನಾವು ಕೆಲಸಕ್ಕೆ ಬಾರದ್ದನ್ನು ಕೇಳುತ್ತಿಲ್ಲ. ರಾಜ್ಯ ಸ್ಥಾನಮಾನ ನಮ್ಮ ಹಕ್ಕು. ಇದನ್ನು ನೀಡುವುದಾಗಿ ಇಲ್ಲಿನ ಜನರಿಗೂ ಭರವಸೆ ನೀಡಲಾಗಿತ್ತು’ ಎಂದರು. 

ADVERTISEMENT

‘ಪ್ರಧಾನಿ, ಗೃಹ ಸಚಿವ ಮತ್ತು ಇತರರೊಂದಿಗೆ ನಾನು ನಡೆಸಿದಮಾತುಕತೆಯು ಖಾಸಗಿಯಾದದು. ಅದು ಬಹಿರಂಗಪಡಿಸುವಂಥದ್ದಲ್ಲ. ಆದರೆ, ರಾಜ್ಯ ಸ್ಥಾನಮಾನ ನೀಡುವ ಸಂಬಂಧ ಹಲವು ಬಾರಿ ಹಲವು ಸಂದರ್ಭಗಳಲ್ಲಿ ಒತ್ತಾಯ ಮಾಡಲಾಗಿದೆ. ಈ ಬಗ್ಗೆ ಇನ್ನು ಮುಂದೆಯೂ ಒತ್ತಡ ಹೇರುತ್ತೇವೆ’ ಎಂದರು. 

ಹೈಬ್ರಿಡ್‌ ಮಾದರಿ ಒಪ್ಪಲ್ಲ: ರಾಜ್ಯ ಸ್ಥಾನಮಾನ ದೊರೆತ ಬಳಿಕವೂ ಜಮ್ಮು ಮತ್ತು ಕಾಶ್ಮೀರದ ಕಾನೂನು ಮತ್ತು ಸುವ್ಯವಸ್ಥೆಯು ಕೇಂದ್ರ ಸರ್ಕಾರದ ಬಳಿಯೇ ಇರುವಂಥ ‘ಹೈಬ್ರಿಡ್‌ ಮಾದರಿ’ ಅನುಸರಿಸುವ ಕುರಿತು ಸಲಹೆ ನೀಡಲಾಗುತ್ತಿದೆ ಎಂಬ ವರದಿಗಳನ್ನು ಒಮರ್‌ ತಳ್ಳಿಹಾಕಿದರು.

‘ದೇಶದಲ್ಲಿ ಎಲ್ಲಿಯೂ ಇಂಥ ಮಾದರಿ ಇಲ್ಲ. ಜನರು ಯಾಕೆ ಈ ರೀತಿ ಊಹಾಪೋಹ ಹರಡುತ್ತಿದ್ದಾರೆ? ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯನ್ನೇ ನಡೆಸುವುದಿಲ್ಲ ಅಥವಾ ಇಲ್ಲಿ ಚುನಾವಣೆಯೇ ನಡೆಯಬಾರದು ಅಂತೆಲ್ಲಾ ಹೇಳಿದವರೇ ಹೈಬ್ರಿಡ್‌ ಮಾದರಿ ಜಾರಿಯಾಗಲಿದೆ ಎಂಬ ವದಂತಿ ಹರಡುತ್ತಿದ್ದಾರೆ’ ಎಂದರು.

‘ಕೈ’ ಕಾರ್ಯಕರ್ತರು ವಶಕ್ಕೆ
ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ಭಾನುವಾರ ಮೆರವಣಿಗೆ ನಡೆಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಕಾಂಗ್ರೆಸ್‌ ಮೆರವಣಿಗೆಗೆ ಎರಡನೇ ಬಾರಿಗೆ ಪೊಲೀಸರು ತಡೆ ಒಡ್ಡಿದರು.

‘ಕೇಂದ್ರಾಡಳಿತ ಪ್ರದೇಶವಾದ ಬಳಿಕವೇ ಉಗ್ರರ ದಾಳಿ ಹೆಚ್ಚಳ’

‘ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ ಬಳಿಕವೇ ಭಯೋತ್ಪಾದಕ ದಾಳಿಗಳು ಹೆಚ್ಚಾಗಿವೆ. ಇಲ್ಲಿ ಚುನಾಯಿತ ಸರ್ಕಾರ ಇದ್ದ ಕಾಲದಲ್ಲಿ ಇಷ್ಟೊಂದು ದಾಳಿಗಳು ನಡೆದಿರಲಿಲ್ಲ’ ಎಂದು ಒಮರ್‌ ಪ್ರತಿಪಾದಿಸಿದರು. ಭದ್ರತೆ ವಿಚಾರದಲ್ಲಿ ಚುನಾಯಿತ ಸರ್ಕಾರವು ಅಸಮರ್ಥ ಎನ್ನುವ ವಾದವನ್ನು ತಳ್ಳಿಹಾಕಿದ ಅವರು ‘ನಾವು ಈ ಹಿಂದೆಯೂ ಇಂಥ ವಿಚಾರಗಳಲ್ಲಿ ಉತ್ತಮ ಕೆಲಸವನ್ನೇ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ಕೇಂದ್ರಾಡಳಿತ ಪ್ರದೇಶ ಎನ್ನುವುದು ಅಷ್ಟೊಂದು ‘ಉತ್ತಮ’ ವ್ಯವಸ್ಥೆಯಾಗಿದ್ದರೆ ಸಣ್ಣ ಭೂಭಾಗದ ಪ್ರದೇಶವನ್ನು ಮಾತ್ರವೇ ಯಾಕೆ ಇದಕ್ಕಾಗಿ ಆಯ್ಕೆ ಮಾಡಲಾಗುತ್ತದೆ’ ಎಂದು ಪ್ರಶ್ನಿಸಿದರು.

‘ಈ ವ್ಯವಸ್ಥೆಯು ಅಷ್ಟೊಂದು ಉತ್ತಮವಾದರೆ ಉತ್ತರ ಪ್ರದೇಶದಲ್ಲಿ ಜಾರಿ ಮಾಡಲಿ. ಮಹಾರಾಷ್ಟ್ರ ಛತ್ತೀಸಗಢ ಮಧ್ಯ ಪ್ರದೇಶ ಈಶಾನ್ಯ ರಾಜ್ಯಗಳನ್ನೂ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ’ ಎಂದು ಆಗ್ರಹಿಸಿದರು.

‘ಪಹಲ್ಗಾಮ್‌ ದಾಳಿ: ಹೊಣೆಗಾರಿಕೆ ನಿಗದಿ ಮಾಡಿ’

‘ಪಹಲ್ಗಾಮ್‌ ದಾಳಿಗೆ ನಾನೇ ಜವಾಬ್ದಾರ ಎಂದು ಲೆಫ್ಟಿನೆಂಟ್‌ ಗವರ್ನರ್‌ ಹೇಳಿರುವುದು ಸ್ವಾಗತಾರ್ಹ. ಭದ್ರತೆ ಹಾಗೂ ಗುಪ್ತಚರದ ವೈಫಲ್ಯದ ಕಾರಣದಿಂದಲೇ ಈ ದಾಳಿ ನಡೆದಿದೆ ಎಂದು ನಮಗೆಲ್ಲಾ ತಿಳಿದಿದೆ. ಈಗ ನಮ್ಮ ಮುಂದಿನ ಹೆಜ್ಜೆ ಹೊಣೆಗಾರರು ಯಾರು ಎಂದು ನಿಗದಿ ಮಾಡುವುದು’ ಎಂದು ಒಮರ್‌ ಅಭಿಪ್ರಾಯಪಟ್ಟರು.

ಭಯೋತ್ಪಾದನೆ ನಿಗ್ರಹಿಸಬೇಕು ಎಂದಾದರೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ರಾಜ್ಯ ಸ್ಥಾನಮಾನವನ್ನು ರದ್ದು ಮಾಡಲೇಬೇಕು ಎಂಬ ವಾದವನ್ನು ಒಮರ್‌ ತಿರಸ್ಕರಿಸಿದರು. ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯನ್ನು ಪ್ರಸ್ತಾಪಿಸಿದರು.

‘ಸಂವಿಧಾನದ 370ನೇ ವಿಧಿ ಅಡಿಯಲ್ಲಿ ನಮಗೆ ನೀಡಲಾಗಿದ್ದ ರಾಜ್ಯ ಸ್ಥಾನಮಾನವನ್ನು ರದ್ದು ಮಾಡಲು ಇಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳೇ ಕಾರಣ ಎಂಬ ಸಂಕಥನವನ್ನು ಸೃಷ್ಟಿಸಲು ಬಿಜೆಪಿ ಬಹಳ ಶ್ರಮವಹಿಸಿತು. ಇದು ಸುಳ್ಳು ಎಂದು ನಮಗೆ ತಿಳಿದಿದೆ. ಇಲ್ಲಿ ನಡೆದ ಉಗ್ರ ಚಟುವಟಿಕೆಗಳಿಗೆ ಪಾಕಿಸ್ತಾನದ ದುರುದ್ದೇಶವೇ ಕಾರಣ. ರಾಜ್ಯ ಸ್ಥಾನಮಾನ ರದ್ದು ಮಾಡಿದ್ದರಿಂದ ಇಲ್ಲಿನ ಭಯೋತ್ಪಾದನಾ ಚಟುವಟಿಕೆ ನಿಂತಿಲ್ಲ’ ಎಂದರು.

ಒಮರ್‌ ಹೇಳಿದ್ದು...

  • 2021ರಿಂದ ಜಮ್ಮು ಮತ್ತು ಕಾಶ್ಮೀರದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದಿಲ್ಲ. ಜೊತೆಗೆ ಇಲ್ಲಿನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕು. ಚುನಾವಣಾ ಆಯೋಗವು ಯಾಕಾಗಿ ಚುನಾವಣೆ ನಡೆಸುವುದನ್ನು ವಿಳಂಬ ಮಾಡುತ್ತಿದೆ?

  • ನಿಧಾನವಾಗಿ ಇಲ್ಲಿ ಪ್ರವಾಸೋದ್ಯಮವು ಮರುಹುಟ್ಟು ಪಡೆದುಕೊಳ್ಳುತ್ತಿದೆ. ಪ್ರವಾಸೋದ್ಯಮವೇ ನಮ್ಮ ಆರ್ಥಿಕತೆ. ಅಮರನಾಥ ಯಾತ್ರೆಯ ಬಳಿಕ ಪ್ರವಾಸೋದ್ಯಮವು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.