
ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಆರ್‌ಜಿಐಎ) ವಿಮಾನಯಾನ ಸಂಬಂಧಿತ ತಂತ್ರಜ್ಞಾನ ಮತ್ತು ಕಾರ್ಯಾಚರಣೆಯ ತೊಡಕಿನಿಂದಾಗಿ ದೆಹಲಿ, ಬೆಂಗಳೂರು ಸೇರಿದಂತೆ ವಿವಿಧೆಡೆಗೆ ತೆರಳಬೇಕಿದ್ದ 40ಕ್ಕೂ ಹೆಚ್ಚು ಇಂಡಿಗೊ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಈ ತೊಡಕಿನಿಂದ ಇಂಡಿಗೊ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಕೆಲವು ವಿಮಾನಗಳ ಸಂಚಾರ ವಿಳಂಬವಾಗಿದ್ದರೆ, ಇನ್ನೂ ಕೆಲವವನ್ನು ರದ್ದುಗೊಳಿಸಲಾಗಿದೆ. ಆರ್‌ಜಿಐಎಗೆ ಬರಬೇಕಿದ್ದ 18 ವಿಮಾನಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಮಾನಗಳ ಸಂಚಾರ ರದ್ದಾಗಿದ್ದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಇಂಡಿಗೊ ಕಂಪನಿಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಜಟಾಪಟಿ ನಡೆದಿರುವ ವಿಡಿಯೊಗಳು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ವಿಮಾನ ನಿಲ್ದಾಣದ ಇತರೆ ಕಾರ್ಯಾಚರಣೆಗಳು ಯಾಥಾಸ್ಥಿತಿಯಲ್ಲಿವೆ. ಇಂಡಿಗೊ ವಿಮಾನಗಳ ಸ್ಥಿತಿ ಮತ್ತು ಇತರೆ ಮಾಹಿತಿಗಾಗಿ ಪ್ರಯಾಣಿಕರು ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಆರ್‌ಜಿಐಎ ತನ್ನ ‘ಎಕ್ಸ್’ನಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.