ADVERTISEMENT

ಕೈಜೋಡಿಸಿ ಕೇಳುವೆ, ಕೃಷಿ ಕಾಯ್ದೆ ರದ್ದು ಪಡಿಸಿ; ಕೇಂದ್ರಕ್ಕೆ ಕೇಜ್ರಿವಾಲ್‌ ಮನವಿ

ಪಿಟಿಐ
Published 27 ಡಿಸೆಂಬರ್ 2020, 17:06 IST
Last Updated 27 ಡಿಸೆಂಬರ್ 2020, 17:06 IST
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌   

ನವದೆಹಲಿ: ರೈತರು ಅವರ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಹೊಸ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧ ನವೆಂಬರ್‌ ಕೊನೆಯ ವಾರದಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿ ಪ್ರದೇಶಕ್ಕೆ ಭಾನುವಾರ ಕೇಜ್ರಿವಾಲ್‌ ಎರಡನೇ ಬಾರಿಗೆ ಭೇಟಿ ನೀಡಿದರು. 'ಕೇಂದ್ರದ ಯಾವುದೇ ಸಚಿವರು ರೈತರೊಂದಿಗೆ ಮುಕ್ತವಾದ ಚರ್ಚೆ ನಡೆಸುವ ಸವಾಲು ಸ್ವೀಕರಿಸಲಿ ಹಾಗೂ ಈ ಕಾಯ್ದೆಗಳು ಎಷ್ಟು ಉಪಯುಕ್ತ ಅಥವಾ ಹಾನಿಕಾರಕ ಎಂಬುದು ಅದರಿಂದ ತಿಳಿಯುತ್ತದೆ' ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

'ರೈತರು ಅವರ ಉಳಿವಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾಯ್ದೆಗಳು ಅವರ ಭೂಮಿಯನ್ನು ಅವರಿಂದ ಕಸಿದುಬಿಡುತ್ತವೆ. ಕೇಂದ್ರ ಸರ್ಕಾರವನ್ನು ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ, ದಯಮಾಡಿ ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ' ಎಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ADVERTISEMENT

ದೆಹಲಿ–ಹರಿಯಾಣ ಗಡಿ ಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಡಿಸೆಂಬರ್‌ 7ರಂದು ಕೇಜ್ರಿವಾಲ್‌ ಮೊದಲ ಬಾರಿಗೆ ಭಾಗಿಯಾಗಿದ್ದರು. ದೆಹಲಿಯ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸಹ ಜೊತೆಗಿದ್ದರು. ಕೇಜ್ರಿವಾಲ್‌ ಮತ್ತು ಅವರ ಎಎಪಿ ಪಕ್ಷ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿದ್ದಾರೆ. ದೆಹಲಿ ಸರ್ಕಾರದಿಂದ ಪ್ರತಿಭಟನಾ ನಿರತ ರೈತರಿಗಾಗಿ ಕೈಗೊಳ್ಳಲಾಗಿರುವ ವ್ಯವಸ್ಥೆಯ ಬಗ್ಗೆ ಕೇಜ್ರಿವಾಲ್‌ ತಮ್ಮ ಮೊದಲ ಭೇಟಿಯಲ್ಲಿ ಪರಿಶೀಲಿಸಿದ್ದರು.

ಸಿಂಘು ಗಡಿ ಪ್ರದೇಶ ಅಷ್ಟೇ ಅಲ್ಲದೆ, ಪಂಜಾಬ್‌, ಹರಿಯಾಣ ಹಾಗೂ ಉತ್ತರ ಪ್ರದೇಶದ ರೈತರು ದೆಹಲಿಯ ಇತರೆ ಗಡಿ ಪ್ರದೇಶಗಳಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.