ಪ್ರವಾಹ ಪೀಡಿತ ಅಸ್ಸಾಂಗೆ ಭೇಟಿ ನೀಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ಪಿಟಿಐ ಚಿತ್ರ
ಸಿಲ್ಚರ್: ಪ್ರವಾಹ ಪೀಡಿತ ಅಸ್ಸಾಂ ಜನರೊಂದಿಗೆ ನಾನು ನಿಲ್ಲುತ್ತೇನೆ. ಜತೆಗೆ ಸಂಸತ್ತಿನಲ್ಲಿ ಅವರ ಪರವಾಗಿ ಧ್ವನಿ ಎತ್ತುತ್ತೇನೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂದು (ಸೋಮವಾರ) ಅಸ್ಸಾಂನ ಕಚ್ಚಾರ್ ಜಿಲ್ಲೆಯ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದ ಅವರು, ಅಲ್ಲಿನ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದಾರೆ.
ಅಸ್ಸಾಂ ಭೇಟಿ ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾನು ಅಸ್ಸಾಂ ಜನರೊಂದಿಗೆ ನಿಲ್ಲುತ್ತೇನೆ. ಜತೆಗೆ ಸಂಸತ್ತಿನಲ್ಲಿ ರಾಜ್ಯದ ಜನರ ಪರವಾಗಿ ಧ್ವನಿ ಎತ್ತುತ್ತೇನೆ. ಪ್ರವಾಹ ಪೀಡಿತ ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಮತ್ತು ಬೆಂಬಲವನ್ನು ತ್ವರಿತವಾಗಿ ಒದಗಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ರಾಜ್ಯಕ್ಕೆ ಸಮಗ್ರ ಮತ್ತು ಸಹಾನುಭೂತಿಯ ಪರಿಹಾರ, ಪುನರ್ವಸತಿ, ಅಲ್ಪಾವಧಿಯ ಪರಿಹಾರ ಮತ್ತು ದೀರ್ಘಾವಧಿಯಲ್ಲಿ ಪ್ರವಾಹವನ್ನು ನಿಯಂತ್ರಿಸಲು ನಿರ್ವಹಣಾ ಪ್ರಾಧಿಕಾರದ ಅಗ್ಯತವಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಸಂಭವಿಸಿರುವ ಪ್ರವಾಹದಿಂದಾಗಿ 24 ಲಕ್ಷ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. 53 ಸಾವಿರ ಮಂದಿ ಸ್ಥಳಾಂತರಗೊಂಡಿದ್ದಾರೆ ಹಾಗೂ 60ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅಸ್ಸಾಂ ಕಾಂಗ್ರೆಸ್ ನಾಯಕರೊಬ್ಬರು ನನಗೆ ತಿಳಿಸಿದರು ಎಂದು ರಾಹುಲ್ ಹೇಳಿದ್ದಾರೆ.
ಈ ಅಂಕಿಅಂಶಗಳು ಪ್ರವಾಹ ಮುಕ್ತ ಅಸ್ಸಾಂನ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಅವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.