ADVERTISEMENT

'ಜನರ ಶಿಕ್ಷಣ ಸರ್ಕಾರದ ಹೊಣೆ'; ಹೇಳಿಕೆಯಿಂದ ಟ್ರೋಲ್‌ ಆಗಿದ್ದೆ–ಅಮಿತ್‌ ಶಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2021, 10:50 IST
Last Updated 27 ಅಕ್ಟೋಬರ್ 2021, 10:50 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಕೇಂದ್ರ ಗೃಹ ಸಚಿವ ಅಮಿತ್‌ ಶಾ   

ನವದೆಹಲಿ: 'ಅನಕ್ಷರಸ್ಥರ ಪಡೆಯಿಂದ ಯಾವುದೇ ರಾಷ್ಟ್ರವೂ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ' ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. ಇದೇ ಹೇಳಿಕೆಯಿಂದ ಹಿಂದೆ ಟ್ರೋಲ್‌ಗೆ ಗುರಿಯಾಗಿದ್ದನ್ನೂ ಪ್ರಸ್ತಾಪಿಸಿದರು.

ನಾನು ಇದೇ ಹೇಳಿಕೆಯಿಂದ ಟ್ರೋಲ್‌ಗೆ ಒಳಗಾಗಿದ್ದೆ, ಆದರೂ ಅದನ್ನು ಮತ್ತೆ ಹೇಳುವೆ ಎಂದ ಅಮಿತ್‌ ಶಾ, 'ಅನಕ್ಷರಸ್ಥರಿಗೆ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ತನ್ನ ರಾಷ್ಟ್ರದ ಸಂವಿಧಾನದ ಹಕ್ಕುಗಳನ್ನು ತಿಳಿಯದ ವ್ಯಕ್ತಿಯು ದೇಶಕ್ಕೆ ಕೊಡುಗೆ ನೀಡಲು ಸಾಧ್ಯವಿಲ್ಲ...' ಎಂದು ಹೇಳಿದರು.

'ಎರಡು ದಶಕಗಳ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮತ್ತು ಪ್ರಜಾಪ್ರಭುತ್ವದ ವಿಸ್ತರಣೆ' ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅಮಿತ್‌ ಶಾ ಮಾತನಾಡಿದರು.

ADVERTISEMENT

ನರೇಂದ್ರ ಮೋದಿ ಅವರು ರಾಜಕೀಯ ಪ‍್ರವೇಶಿಸಿದಾಗಿಂದ ಮಾಡಿರುವ ಸಾಧನೆಗಳನ್ನು ಅವರು ಪ್ರಸ್ತಾಪಿಸಿದರು. 'ಮೋದಿ ಜೀ ಗುಜರಾತ್‌ನ ಮುಖ್ಯಮಂತ್ರಿಯಾದಾಗ, ರಾಜ್ಯದಲ್ಲಿ ಶಾಲೆಗಳಿಗೆ ಶೇ 67ರಷ್ಟು ನೋಂದಣಿಯಾಗುತ್ತಿದ್ದರು ಹಾಗೂ ಶೇ 37ರಷ್ಟು ಹೊರಗುಳಿದಿದ್ದರು. ಅವರು ಬೇಟಿ ಬಚಾವೊ, ಬೇಟಿ ಪಡಾವೊ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಲಿಂಗಾನುಪಾತ ಮತ್ತು ಶಿಕ್ಷಣವನ್ನು ಪ್ರಚುರ ಪಡಿಸಿದರು. ಇದರಿಂದಾಗಿ ಕಲಿಕೆಗೆ ನೋಂದಾಯಿಸುವ ಪ್ರಮಾಣ ಶೇಕಡ 100ಕ್ಕೆ ಏರಿಕೆಯಾಯಿತು ಹಾಗೂ ಶಾಲೆಯಿಂದ ಹೊರಗುಳಿಯುವ ಪ್ರಮಾಣವನ್ನು ಬಹುತೇಕ ಶೂನ್ಯಕ್ಕೆ ಇಳಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಯಿತು' ಎಂದರು.

2001ರ ವರೆಗೂ ಆಡಳಿತದ ಅನುಭವವಿರದ ನರೇಂದ್ರ ಮೋದಿ ಅವರನ್ನು ಗುಜರಾತ್‌ನ ಮುಖ್ಯಮಂತ್ರಿ ಮಾಡುವುದು ಬಿಜೆಪಿಯ 'ಅಪರೂಪದ' ನಿರ್ಧಾರವಾಗಿತ್ತು ಎಂದು ನೆನಪಿಸಿಕೊಂಡರು.

'1960ರ ದಶಕ ಬಳಿಕ 2014ರ ಹೊತ್ತಿಗೆ ಬಹುಪಕ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯು ಯಶಸ್ವಿಯಾಗುವ ಕುರಿತು ಜನರು ಅನುಮಾನ ವ್ಯಕ್ತಪಡಿಸಿದರು...ಬಹಳ ತಾಳ್ಮೆಯಿಂದ ಜನರು ನಿರ್ಧಾರ ತೆಗೆದುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರ ನೀಡಿದರು' ಎಂದು ಅಮಿತ್‌ ಶಾ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.