ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನಗಳು ರಾತ್ರಿ ಕಾರ್ಯಾಚರಣೆಯ ದೃಶ್ಯ
–ಪಿಟಿಐ ಚಿತ್ರ
ಲಖನೌ: ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನಗಳು ರಾತ್ರಿಯ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಜಲಾಲಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿರು ಗ್ರಾಮದ ಬಳಿಯ 3.5 ಕಿಲೋಮೀಟರ್ ಉದ್ದದ ವಾಯುನೆಲೆಯಲ್ಲಿ ಶುಕ್ರವಾರ ಸಂಜೆ 7ರಿಂದ 10 ಗಂಟೆಯವರೆಗೆ ತಾಲೀಮು ನಡೆದಿದ್ದು, ರಫೇಲ್, ಸುಖೋಯ್, ಜಾಗ್ವಾರ್ ಮತ್ತು ಮಿರಾಜ್–2000 ಹಾಗೂ ಎಂ-32ನಂತಹ ಯುದ್ಧ ವಿಮಾನಗಳು ಕಸರತ್ತು ನಡೆಸಿವೆ.
‘ರಾತ್ರಿ ಕಾರ್ಯಾಚರಣೆಯ ಭಾಗವಾಗಿ ಯುದ್ಧ ವಿಮಾನಗಳು ಯಶಸ್ವಿಯಾಗಿ ಹಾರಾಟ ನಡೆಸಿದವು. ಈ ತಾಲೀಮು ನಿಖರವಾದ ಲ್ಯಾಂಡಿಂಗ್, ಸಂಘಟಿತ ಟೇಕ್-ಆಫ್‌ಗಳು ಮತ್ತು ಯುದ್ಧತಂತ್ರದ ಕಾರ್ಯಾಚರಣೆಗಳನ್ನು ಒಳಗೊಂಡಿತ್ತು. ಕಣ್ಗಾವಲು ಮತ್ತು ಭದ್ರತೆಗಾಗಿ ವಾಯುನೆಲೆಯ ಸುತ್ತಲೂ 250ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.
ಬಲವಾದ ಗಾಳಿ ಮತ್ತು ಪ್ರತಿಕೂಲ ಹವಾಮಾನದ ಹೊರತಾಗಿಯೂ ಯುದ್ಧ ವಿಮಾನಗಳ ತಾಲೀಮು ಯಶಸ್ವಿಯಾಗಿ ಪೂರ್ಣಗೊಂಡಿತು. ಹಾಗೆಯೇ ರಾತ್ರಿ ಕಾರ್ಯಾಚರಣೆಗಳು ಹೆಚ್ಚು ಪರಿಣಾಮಕಾರಿ ಎಂಬುದು ಸಾಬೀತಾಯಿತು ಎಂದು ದ್ವಿವೇದಿ ಹೇಳಿದ್ದಾರೆ.
ಯುದ್ಧ ವಿಮಾನಗಳ ತಾಲೀಮು ಹಮ್ಮಿಕೊಂಡಿದ್ದರಿಂದ ವಾಯುನೆಲೆಯ ಬಳಿಯ ಬರೇಲಿ-ಇಟಾವಾ ಮಾರ್ಗದಲ್ಲಿ ಮೂರು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀರತ್ ಮತ್ತು ಪ್ರಯಾಗ್‌ರಾಜ್ ನಡುವಿನ 594 ಕಿ.ಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಉತ್ತರ ಪ್ರದೇಶ ಸಚಿವ ಸಂಪುಟ ಸೆಪ್ಟೆಂಬರ್ 2021ರಲ್ಲಿ ಅನುಮೋದನೆ ನೀಡಿತ್ತು. ಅನುಮೋದನೆಯ ಸಮಯದಲ್ಲಿ ಎಕ್ಸ್‌ಪ್ರೆಸ್‌ವೇಯಲ್ಲಿ ನಾಗರಿಕ ಮತ್ತು ನಿರ್ಮಾಣ ಕಾರ್ಯಗಳ ಅಂದಾಜು ವೆಚ್ಚ ₹36,230 ಕೋಟಿಯಷ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.