ADVERTISEMENT

ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್ ನಿಧನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2021, 8:48 IST
Last Updated 15 ಡಿಸೆಂಬರ್ 2021, 8:48 IST
ಪ್ರಾಣ ಪಣಕ್ಕಿಟ್ಟು ಯುದ್ಧವಿಮಾನ ರಕ್ಷಿಸಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌
ಪ್ರಾಣ ಪಣಕ್ಕಿಟ್ಟು ಯುದ್ಧವಿಮಾನ ರಕ್ಷಿಸಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌   

ನವದೆಹಲಿ: ಗ್ರೂ‍ಪ್ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ರಾಷ್ಟ್ರಕ್ಕೆ ಹೆಮ್ಮೆ, ಶೌರ್ಯ ಮತ್ತು ಅತ್ಯಂತ ವೃತ್ತಿಪರತೆಯೊಂದಿಗೆ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ನನಗೆ ಅತೀವ ನೋವಾಗಿದೆ. ದೇಶಕ್ಕಾಗಿ ಅವರು ಸಲ್ಲಿಸಿದ ಉತ್ಕೃಷ್ಟ ಸೇವೆ ಎಂದಿಗೂ ಮರೆಯಲಾಗುವುದಿಲ್ಲ. ಅವರ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ನನ್ನ ಸಂತಾಪ. ಓಂ ಶಾಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

‘ಐಎಎಫ್ ಪೈಲಟ್, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನದ ಸುದ್ದಿ ತಿಳಿಯಲಾಗದಷ್ಟು ನೋವಾಗಿದೆ. ಕೊನೆಯುಸಿರಿರುವವರೆಗೂ ಹೋರಾಡಿದ ನಿಜವಾದ ಹೋರಾಟಗಾರ. ಅವರ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಈ ದುಃಖದ ಸಮಯದಲ್ಲಿ ನಾವು ಕುಟುಂಬದೊಂದಿಗೆ ನಿಲ್ಲುತ್ತೇವೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನ ಸುದ್ದಿ ತಿಳಿದು ತೀವ್ರ ನೋವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ’ ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಡಿ.8ರಂದು ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ವಾಯುಪಡೆಯ ಹೆಲಿಕಾಪ್ಟರ್‌ ದುರಂತದಲ್ಲಿ ವರುಣ್ ಸಿಂಗ್‌ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ಅವರು ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ವರುಣ್‌ ಸಿಂಗ್‌ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.