ADVERTISEMENT

ಆರು ತಿಂಗಳಲ್ಲಿ ಶಾಸಕಿಯಾಗದಿದ್ದರೂ ಮಮತಾ ಸಿಎಂ! ಏನಿದು ಟಿಎಂಸಿ ತಂತ್ರಗಾರಿಕೆ?

ಡೆಕ್ಕನ್ ಹೆರಾಲ್ಡ್
Published 5 ಜುಲೈ 2021, 9:42 IST
Last Updated 5 ಜುಲೈ 2021, 9:42 IST
ಮಮತಾ ಬ್ಯಾರ್ನಜಿ (ಪಿಟಿಐ ಚಿತ್ರ)
ಮಮತಾ ಬ್ಯಾರ್ನಜಿ (ಪಿಟಿಐ ಚಿತ್ರ)   

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾರ್ನಜಿ ಅವರು ವಿಧಾನಸಭೆಗೆ ಆಯ್ಕೆಯಾಗಬೇಕಾದ ಅವಧಿ ಇನ್ನು ನಾಲ್ಕು ತಿಂಗಳು ಇದೆ. ಉಪಚುನಾವಣೆ ಯಾವಾಗ ನಡೆಯಬಹುದು ಎಂಬ ಸುಳಿವೇ ಇಲ್ಲದಿದ್ದರೂ ಆಡಳಿತ ಪಕ್ಷ ಹಾಗೂ ಮಮತಾ ಆ ಬಗ್ಗೆ ಚಿಂತಿಸುತ್ತಿಲ್ಲ. ಒಂದು ವೇಳೆ ಉಪಚುನಾವಣೆ ನಡೆಯದಿದ್ದರೆ ಮುಖ್ಯಮಂತ್ರಿ ಪಟ್ಟವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಸ್ಪಷ್ಟ ಚಿಂತನೆ ಅವರಲ್ಲಿದೆ ಎಂದು ಮೂಲಗಳು ಹೇಳಿವೆ.

ಸಂವಿಧಾನದ ನಿಯಮಗಳ ಪ್ರಕಾರ ವಿಧಾನಸಭೆಯ ಸದಸ್ಯನಾಗಿರದೆ ಆರು ತಿಂಗಳು ಯಾವುದೇ ಮಂತ್ರಿ ಸ್ಥಾನದಲ್ಲಿ ಮುಂದುವರಿಯಬಹುದು. ಆ ಬಳಿಕ ಸ್ಥಾನ ಉಳಿಯಬೇಕಿದ್ದರೆ ಚುನಾವಣೆಯಲ್ಲಿ ಜಯ ಗಳಿಸಬೇಕು. ಇಲ್ಲವಾದಲ್ಲಿ ರಾಜೀನಾಮೆ ನೀಡಬೇಕಾಗುತ್ತದೆ. ಮಮತಾ ಅವರು ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಅವರು ಹಿಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಭವಾನಿಪುರ ಕ್ಷೇತ್ರದ ಶಾಸಕ ಶೋಭಾನ್‌ ದೇವ್‌ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿ ತಮ್ಮ ನಾಯಕಿಗೆ ಸ್ಥಾನ ತೆರವು ಮಾಡಿಕೊಟ್ಟಿದ್ದಾರೆ.

ಭವಾನಿಪುರ ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ ಒಟ್ಟು 7 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಬೇಕಿದೆ. ಶೀಘ್ರವೇ ಉಪಚುನಾವಣೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಸರ್ಕಾರ ಒತ್ತಾಯಿಸುತ್ತಿದ್ದರೂ ಕೋವಿಡ್ ಕಾರಣದಿಂದ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೂ ಮಮತಾ ಪಟ್ಟ ಉಳಿಸಿಕೊಳ್ಳುವುದು ಹೇಗೆ?

ಹೀಗಿದೆ ಟಿಎಂಸಿ ತಂತ್ರ...

ಉಪಚುನಾವಣೆ ನಡೆಯದಿದ್ದರೆ ಆರು ತಿಂಗಳ ಅವಧಿ ಮುಕ್ತಾಯಗೊಳ್ಳುವ ಎರಡು ದಿನಗಳ ಮೊದಲು ಮುಖ್ಯಮಂತ್ರಿ ಹುದ್ದೆಗೆ ಮಮತಾ ರಾಜೀನಾಮೆ ನೀಡಲಿದ್ದಾರೆ. ಎರಡು ದಿನಗಳ ಬಳಿಕ ಮತ್ತೆ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಸಂಸದ, ವಕ್ತಾರ ಸೌಗತಾ ರಾಯ್ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಉತ್ತರಾಖಂಡದ ಮುಖ್ಯಮಂತ್ರಿ ಸ್ಥಾನಕ್ಕೆ ತೀರಥ್ ಸಿಂಗ್ ರಾವತ್‌ ಅವರು ರಾಜೀನಾಮೆ ನೀಡಿರುವುದನ್ನು ಮಮತಾ ಅವರನ್ನು ಮಣಿಸಲು ಬಿಜೆಪಿ ತಂತ್ರ ಎಂದು ವಿಶ್ಲೇಷಿಸಲಾಗಿತ್ತು. ಮಮತಾ ಬ್ಯಾನರ್ಜಿ ಅವರು ನಿಯಮಾನುಸಾರ ಆಯ್ಕೆಯಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದನ್ನು ತಪ್ಪಿಸಲು ಬಿಜೆಪಿಯು ರಾವತ್‌ ಅವರ ರಾಜೀನಾಮೆ ಎಂಬ ನೈತಿಕತೆಯ ದಾಳ ಉರುಳಿಸಿದೆ ಎಂದು ಕಾಂಗ್ರೆಸ್‌ನ ಕರಣ್‌ ಮಹರಾ ವಿಶ್ಲೇಷಿಸಿದ್ದರು. ಕೋವಿಡ್‌-19 ಕಾರಣ ಕೊಟ್ಟು ಉಪ ಚುನಾವಣೆಯನ್ನು ಮುಂದೂಡಿದರೆ ಮಮತಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಅಂಥ ಪರಿಸ್ಥಿತಿ ನಿರ್ಮಾಣ ಮಾಡಲು ಬಿಜೆಪಿ ಮುಂದಾಗಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಟಿಎಂಸಿ ಹೊಸ ದಾರಿ ಕಂಡುಕೊಂಡಿರುವ ಸುಳಿವು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.