ADVERTISEMENT

ಶಿವಸೇನೆ ಎನ್‌ಡಿಎಗೆ ಬರಬೇಕು, ಇಲ್ಲವೇ ಶರದ್‌ ಪವಾರ್‌ ಆದರೂ ಬರಲಿ: ಕೇಂದ್ರ ಸಚಿವ

ಏಜೆನ್ಸೀಸ್
Published 28 ಸೆಪ್ಟೆಂಬರ್ 2020, 11:51 IST
Last Updated 28 ಸೆಪ್ಟೆಂಬರ್ 2020, 11:51 IST
ಕೇಂದ್ರ ಸಚಿವ ರಾಮದಾಸ ಅಠವಾಳೆ
ಕೇಂದ್ರ ಸಚಿವ ರಾಮದಾಸ ಅಠವಾಳೆ    

ಮುಂಬೈ: ಶಿವಸೇನೆ ಮತ್ತೆ ಬಿಜೆಪಿ ಜೊತೆಗೆ ಬರಬೇಕು. ಇಲ್ಲವೇ ಮಹಾರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಶರದ್‌ ಪವಾರ್‌ ಆದರೂ ಎನ್‌ಡಿಎ ಸೇರಬೇಕು ಎಂದು ಕೇಂದ್ರ ಸಾಮಾಜ ಕಲ್ಯಾಣ ಇಲಾಖೆ ರಾಜ್ಯ ಸಚಿವರಾಮದಾಸ್‌ ಅಠವಾಳೆ ಹೇಳಿದ್ದಾರೆ.

ಮುಂಬೈನಲ್ಲಿ ಸೋಮವಾರ ಮಾತನಾಡಿರುವ ಅವರು, ‘ಶಿವಸೇನೆ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಬೇಕು. ಶಿವಸೇನೆ ನಮ್ಮೊಂದಿಗೆ ಬರದಿದ್ದರೆ, ರಾಜ್ಯದ ಅಭಿವೃದ್ಧಿಗಾಗಿ ಎನ್‌ಡಿಎಗೆ ಸೇರಲು ನಾನು (ಎನ್‌ಸಿಪಿ ಮುಖ್ಯಸ್ಥ) ಶರದ್ ಪವಾರ್ ಅವರಿಗೆ ಮನವಿ ಮಾಡುತ್ತೇನೆ. ಅವರು ಭವಿಷ್ಯದಲ್ಲಿ ದೊಡ್ಡ ಹುದ್ದೆಯನ್ನು ಪಡೆಯುವ ಅವಕಾಶಗಳಿವೆ. ಶಿವಸೇನೆಯೊಂದಿಗೆ ಉಳಿಯುವುದರಿಂದ ಯಾವುದೇ ಪ್ರಯೋಜನವಿಲ್ಲ,’ ಎಂದು ‘ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ’ (ಆರ್‌ಪಿಐ) ನಾಯಕರೂ ಆಗಿರುವಅಠವಾಳೆ ಹೇಳಿದ್ದಾರೆ.

ಎನ್‌ಡಿಎ ಮೈತ್ರಿಕೂಟದಲ್ಲಿದ್ದ ಉದ್ಧವ ಠಾಕ್ರೆ ಅವರ ನೇತೃತ್ವದ ಶಿವಸೇನೆ, 2019ರ ವಿಧಾನಸಭೆ ಚುನಾವಣೆ ನಂತರ ಕೂಟ ತೊರೆದಿದೆ. ಕಾಂಗ್ರೆಸ್‌, ಎನ್‌ಸಿಪಿ ಜೊತೆ ಸೇರಿ ‘ಮಹಾ ವಿಕಾಸ ಅಘಾಡಿ’ ಎಂಬ ಮೈತ್ರಿಕೂಟ ರಚಿಸಿ ಮೈತ್ರಿ ಸರ್ಕಾರ ನಡೆಸುತ್ತಿದೆ.

ADVERTISEMENT

ಇತ್ತೀಚೆಗೆ ಶಿವಸೇನೆಯ ಮುಖ್ಯ ವಕ್ತಾರ ಸಂಜಯ್‌ ರಾವುತ್‌ ಅವರು ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಅವರನ್ನು ಪಂಚತಾರ ಹೋಟೆಲ್‌ವೊಂದರಲ್ಲಿ ಭೇಟಿ ಮಾಡಿದ್ದರು. ಶಿವಸೇನೆಯು ಬಿಜೆಪಿಯೊಂದಿಗೆ ಮತ್ತೊಮ್ಮೆ ಸಖ್ಯ ಬೆಳೆಸುವುದೇ ಎಂಬ ಅನುಮಾನಗಳು ಈ ಬೆಳವಣಿಗೆ ನಂತರ ಮೂಡಿದ್ದವು. ಆದರೆ, ಬಿಜೆಪಿ ಇದನ್ನು ನಿರಾಕರಿಸಿದೆ. ಫಡ್ನವೀಸ್‌–ರಾವುತ್‌ ನಡುವಿನ ಭೇಟಿ ರಾಜಕಾರಣಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಮಧ್ಯೆ ಕೇಂದ್ರ ಸಚಿವ ರಾಮದಾಸ್‌ ಅಠವಾಳೆ ಈ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.