ನವದೆಹಲಿ: ‘ಪಾಕಿಸ್ತಾನ ಮತ್ತು ನರಕ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸಮಯ ಬಂದರೆ ನಾನು ನರಕವನ್ನೇ ಆಯ್ದುಕೊಳ್ಳುತ್ತೇನೆ’ ಎಂದು ಖ್ಯಾತ ಸಾಹಿತಿ, ಗೀತ ರಚನೆಕಾರ ಜಾವೇದ್ ಅಖ್ತರ್ ಹೇಳಿದ್ದಾರೆ.
ಮುಂಬೈನಲ್ಲಿ ಶನಿವಾರ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಮ್ಮನ್ನು ನಾಸ್ತಿಕ ಎಂದು ಗುರುತಿಸಿಕೊಂಡ ಅಖ್ತರ್, ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಂದಲೂ ತೀವ್ರವಾದಿಗಳು ಪ್ರತಿದಿನ ನನ್ನ ಮೇಲೆ ನಿಂದನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಅವರಲ್ಲಿ ಒಬ್ಬರು ನನ್ನನ್ನು ನಿಂದಿಸುವುದನ್ನು ನಿಲ್ಲಿಸಿದರೆ, ಅದು ನನಗೆ ಕಳವಳದ ವಿಷಯ’ ಎಂದು ಹೇಳಿದರು.
‘ನನ್ನ ಟ್ವಿಟರ್ (ಎಕ್ಸ್) ಮತ್ತು ವಾಟ್ಸ್‌ಆ್ಯಪ್ ಖಾತೆಗಳನ್ನು ತೋರಿಸುತ್ತೇನೆ, ಎರಡೂ ಕಡೆಯವರು ನನ್ನನ್ನು ನಿಂದಿಸಿದ್ದಾರೆ. ಒಂದು ಕಡೆಯವರು ನೀವು ಕಾಫಿರ್ (ದೇವರನ್ನು ನಂಬದವ) ನರಕಕ್ಕೇ ಹೋಗುತ್ತೀರಿ ಎನ್ನುತ್ತಾರೆ, ಇನ್ನೊಂದು ಕಡೆಯವರು ‘ನೀವು ಜಿಹಾದಿ, ಪಾಕಿಸ್ತಾನಕ್ಕೆ ನಡೆಯಿರಿ’ ಎಂದು ಜರಿಯುತ್ತಾರೆ. ಹೀಗಾಗಿ ಪಾಕಿಸ್ತಾನ ಮತ್ತು ನರಕ ಎರಡರ ನಡುವೆ ನನ್ನ ಆಯ್ಕೆ ನರಕವೇ ಆಗಿರುತ್ತದೆ’ ಎಂದು ಅಖ್ತರ್ ಹೇಳಿದ್ದಾರೆ.
‘ನಾಗರಿಕರು ಯಾವುದೇ ರಾಜಕೀಯ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ. ಆ ಮೂಲಕ ಅವರು ತಮಗೆ ಸರಿ ಎನಿಸಿದ್ದು ಮತ್ತು ತಪ್ಪನ್ನು ತಪ್ಪು ಎಂದು ಹೇಳಬಹುದು. ಪಕ್ಷ ನಿಷ್ಠೆ ಇರಬಾರದು. ಎಲ್ಲಾ ಪಕ್ಷಗಳು ನಮ್ಮವು, ಆದರೆ ಯಾವುದೇ ಪಕ್ಷ ನಮ್ಮದಲ್ಲ ಎನ್ನುವ ಮನಸ್ಥಿತಿಯಿರಬೇಕು. ಅಂತಹವರಲ್ಲಿ ನಾನು ಕೂಡ ಒಬ್ಬ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.