ADVERTISEMENT

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದಿದ್ದರೆ ಖೇಲ್‌ ರತ್ನ ಹಿಂದಿರುಗಿಸುವೆ: ವಿಜೇಂದರ್

ಏಜೆನ್ಸೀಸ್
Published 6 ಡಿಸೆಂಬರ್ 2020, 10:02 IST
Last Updated 6 ಡಿಸೆಂಬರ್ 2020, 10:02 IST
ದೆಹಲಿ ಹೊರವಲಯದ ಸಿಂಗು ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಭಾಗವಹಿಸಿದ್ದ ಒಲಿಂಪಿಕ್ಸ್‌ ಪದಕ ವಿಜೇತ ವಿಜೇಂದರ್‌ ಸಿಂಗ್‌
ದೆಹಲಿ ಹೊರವಲಯದ ಸಿಂಗು ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಭಾಗವಹಿಸಿದ್ದ ಒಲಿಂಪಿಕ್ಸ್‌ ಪದಕ ವಿಜೇತ ವಿಜೇಂದರ್‌ ಸಿಂಗ್‌    

ನವದೆಹಲಿ: 'ಒಂದು ವೇಳೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ಹೋದರೆ, ಖೇಲ್‌ ರತ್ನ ಪ್ರಶಸ್ತಿ ಹಿಂದಿರುಗಿಸುವೆ,' ಎಂದು ಒಲಿಂಪಿಕ್ಸ್‌ ಪದಕ ವಿಜೇತ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ.

ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, ಬೆಲೆ ಖಾತರಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಮತ್ತು ರಕ್ಷಣೆ) ಕಾಯ್ದೆ ಮತ್ತು ಕೃಷಿ ಸೇವೆಗಳು ಮತ್ತು ಅಗತ್ಯ ವಸ್ತು ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಹೊರವಲಯದ ಸಿಂಗು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಭಾನುವಾರ 11ನೇ ದಿನಕ್ಕೆ ಕಾಲಿಟ್ಟಿದೆ.

ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಾಕ್ಸರ್‌ ವಿಜೇಂದರ್‌ ಸಿಂಗ್‌, ರೈತರಿಗೆ ಬೆಂಬಲ ಘೋಷಿಸಿದರು. ನಂತರ ಮಾತನಾಡಿದ ಅವರು, ' ಕೇಂದ್ರ ಸರ್ಕಾರ ಒಂದೊಮ್ಮೆ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದೇ ಹೋದರೆ, ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯನ್ನು ಹಿಂದಿರುಗಿಸಬೇಕಾಗುತ್ತದೆ,' ಎಂದು ಎಚ್ಚರಿಕೆ ನೀಡಿದರು.

ADVERTISEMENT

ಕ್ರೀಡಾ ಸಾಧನೆಗೆ ಭಾರತದಲ್ಲಿ ನೀಡಲಾಗುವ ಅತ್ಯುನ್ನತ ಗೌರವ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯಾಗಿದೆ.

2008ರಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಬಾಕ್ಸರ್‌ ವಿಜೇಂದರ್‌ ಸಿಂಗ್‌, 2019ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಸೇರಿದ್ದರು. ದೆಹಲಿ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರು ಸೋಲುಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.