ADVERTISEMENT

ಗಾಳಿ ಬೀಸಲಷ್ಟೇ ಯೋಗ್ಯವಾದ ಪುಟ್ಟ ಫ್ಯಾನ್‌ ಅಳವಡಿಕೆಗೆ ಮುಂದಾದ IIT ಖರಗ್‌ಪುರ

ಪಿಟಿಐ
Published 31 ಜುಲೈ 2025, 13:42 IST
Last Updated 31 ಜುಲೈ 2025, 13:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೋಲ್ಕತ್ತ: ವಿದ್ಯಾರ್ಥಿ ನಿಲಯಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೊಡ್ಡ ಫ್ಯಾನ್‌ಗಳ ಬದಲು ಗಾಳಿ ಬೀಸಲಷ್ಟೇ ಯೋಗ್ಯವಾದ ಸಾಧನ ಅಳವಡಿಸಲು ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಖರಗ್‌ಪುರ ಮುಂದಾಗಿದೆ.

ಇದೇ ವರ್ಷ ಕ್ಯಾಂಪಸ್‌ನಲ್ಲಿ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಾನಸಿಕ ಒತ್ತಡಕ್ಕೆ ಒಳಗಾದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಯಂತ ಕಠಿಣ ಕ್ರಮಕ್ಕೆ ಮುಂದಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಂಸ್ಥೆ ಈ ನಿರ್ಧಾರಕ್ಕೆ ಮುಂದಾಗಿದೆ.

‘ಯಾವುದೇ ಒತ್ತಡದಲ್ಲಿದ್ದರೂ ದಿನದ 24 ಗಂಟೆಗಳ ಕಾಲ ವಿದ್ಯಾರ್ಥಿಗಳು ಸಂಪರ್ಕಿಸಲು ಅನುಕೂಲವಾಗುವಂತ ಕ್ರಮ, ವಿದ್ಯಾರ್ಥಿಗಳೊಂದಿಗೆ ಮಹಿಳಾ ಸಿಬ್ಬಂದಿ ಸಮಾಲೋಚನೆ ನಡೆಸುವ ‘ಕ್ಯಾಂಪಸ್‌ ಮದರ್‌’ ಕಾರ್ಯಕ್ರಮ, ಕ್ಯಾಂಪಸ್‌ನಲ್ಲಿ ಕಾಯಂ ಮನೋವೈದ್ಯರ ನೇಮಕದ ಜತೆಗೆ, ಸೀಲಿಂಗ್ ಫ್ಯಾನ್‌ಗಳನ್ನು ಗಾಳಿ ಬೀಸಲು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಬಳಸದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕ ಸುಮನ್ ಚಕ್ರಬೊರ್ತಿ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

‘ಮಾನಸಿಕ ಒತ್ತಡಕ್ಕೆ ಸಿಲುಕಿರುವ ವಿದ್ಯಾರ್ಥಿಗೆ ಸೀಲಿಂಗ್‌ ಫ್ಯಾನ್ ಬದಲಾವಣೆ ಪರಿಹಾರವಾಗದು. ಆದರೆ, ಅವರು ಪ್ರಾಣಕ್ಕೆ ಕಂಟಕವಾಗಬಲ್ಲದ ಕಠಿಣ ಕ್ರಮಕ್ಕೆ ಮುಂದಾಗುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಅನಿವಾರ್ಯವಾಗಿದೆ’ ಎಂದಿದ್ದಾರೆ.

‘ಸಂಸ್ಥೆಯಲ್ಲಿ 16 ಸಾವಿರ ವಿದ್ಯಾರ್ಥಿಗಳಿದ್ದಾರೆ. ಇವರಿಗಾಗಿ 21 ವಿದ್ಯಾರ್ಥಿ ನಿಲಯಗಳಿವೆ. ಹಂತ ಹಂತವಾಗಿ ಇವುಗಳಲ್ಲಿ ಪುಟ್ಟ ಮಾದರಿಯ ಫ್ಯಾನ್‌ಗಳನ್ನು ಅಳವಡಿಸಲಾಗುವುದು’ ಎಂದರು.

‘ಮೆಕ್ಯಾನಿಕಲ್ ವಿಭಾಗದ ನಾಲ್ಕನೇ ವರ್ಷದ ಬಿ.ಟೆಕ್. ವಿದ್ಯಾರ್ಥಿ ರಿತಮ್ ಮಂಡಲ್ ಅವರ ಮೃತದೇಹವು ಜುಲೈ 18ರಂದು ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದಾದ ನಂತರ ವಿವಿಧ ಪ್ರತಿಷ್ಠಿತ ಸಂಸ್ಥೆಗಳ 10 ಸದಸ್ಯರ ಸತ್ಯ ಶೋಧನ ಸಮಿತಿಯನ್ನು ರಚಿಸಲಾಗಿತ್ತು. ಇದೇ ರೀತಿಯಲ್ಲಿ ಜ. 12ರಂದು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಶಾನ್ ಮಲ್ಲಿಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಏ. 20ರಂದು ಸಾಗರ ಅಧ್ಯಯನ ಎಂಜಿನಿಯರಿಂಗ್ ವಿದ್ಯಾರ್ಥಿ ಅನಿಕೇತ್ ವಾಕರ್‌, ಮೇ 4 ಮೂರನೇ ವರ್ಷದ ಬಿ.ಟೆಕ್. ವಿದ್ಯಾರ್ಥಿ ಮೊಹಮ್ಮದ್ ಆಸಿಫ್ ಖಮಾರ್ ತಮ್ಮ ಹಾಸ್ಟೆಲ್ ಕೊಠಡಿಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ ವಿದ್ಯಾರ್ಥಿ ನಿಲಯದ ಕೊಠಡಿಗಳ ಬಾಗಿಲುಗಳಿಗೆ ಬಾರ್‌ ಕೋಡ್‌ಗಳನ್ನು ಅಂಟಿಸಲಾಗಿದೆ. ಇದನ್ನು ತಮ್ಮ ಮೊಬೈಲ್‌ನಿಂದ ಸ್ಕ್ಯಾನ್ ಮಾಡಿದರೆ, ವಿದ್ಯಾರ್ಥಿಗಳು ಆಪ್ತ ಸಮಾಲೋಚಕರನ್ನು ಸಂಪರ್ಕಿಸುವ ಸಹಾಯವಾಣಿಗೆ ಕರೆ ಮಾಡಬಹುದು. ಒತ್ತಡಕ್ಕೆ ಒಳಗಾಗುವ ವಿದ್ಯಾರ್ಥಿ ದಿನದ ಯಾವುದೇ ಸಮಯದಲ್ಲಾದರೂ ಈ ನೆರವನ್ನು ಪಡೆಯಬಹುದು ಎಂದು ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.