
ಕೋಲ್ಕತ್ತ: ಬಿಹಾರದ ಬಾಗಲ್ಪುರ ಜಿಲ್ಲೆಯಲ್ಲಿ ಕಾನೂನುಬಾಹಿರ ಬಂದೂಕು ತಯಾರಿಕಾ ಕಾರ್ಖಾನೆಯನ್ನು ಭೇದಿಸಲಾಗಿದ್ದು, ಈ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತ ಪೊಲೀಸರು ಬುಧವಾರ ಹೇಳಿದ್ದಾರೆ.
ಸುಳಿವಿನ ಮೇರೆಗೆ ಕೋಲ್ಕತ್ತ ಪೊಲೀಸ್ ಎಸ್‌ಟಿಎಫ್ ಮತ್ತು ಬಿಹಾರ ಪೊಲೀಸರ ಜಂಟಿ ತಂಡವು, ಸೋಮವಾರ ಸಂಜೆ ಇಲ್ಲಿನ ಮಧುಸೂದನಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಹಮತ್‌ಬಾಗ್ ಗ್ರಾಮದ ಮನೆಯೊಂದರ ಮೇಲೆ ಕಾರ್ಯಾಚರಣೆ ಮಾಡಿ ಕಾರ್ಖಾನೆಯನ್ನು ಪತ್ತೆಹಚ್ಚಿದ್ದಾರೆ ಎಂದು ಹೇಳಿಕೆಯೊಂದು ತಿಳಿಸಿದೆ.
ಮನೆಯ ಮೊದಲ ಮಹಡಿಯಲ್ಲಿ ಕಾರ್ಖಾನೆ ಇದ್ದು, ಅದನ್ನು ಮರೆಮಾಚಲು ಕೆಳಗಿನ ಮಹಡಿಯಲ್ಲಿ ನೂಲಿನ ಗಿರಣಿಯನ್ನು ಸ್ಥಾಪಿಸಲಾಗಿತ್ತು.
‘ಘಟಕದ ಸಹ–ಮಾಲೀಕ ಮತ್ತು ನಾಲ್ವರು ನುರಿತ ಬಂದೂಕು ತಯಾರಕರನ್ನು ಕಾರ್ಯಾಚರಣೆಯ ವೇಳೆ ಬಂಧಿಸಲಾಗಿದೆ. ಈ ವೇಳೆ ಅರೆ ಸಿದ್ಧವಾದ 20 ನಾಡ ಪಿಸ್ತೂಲ್‌ಗಳು, 8 ಪಿಸ್ತೂಲ್ ಬ್ಯಾರೆಲ್‌ಗಳು, ಭಾರಿ ಪ್ರಮಾಣದ ಯಂತ್ರೋಪಕರಣಗಳು ಮತ್ತು ಕಚ್ಛಾವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿಕೆ ತಿಳಿಸಿದೆ.
ಬಂಧಿತರೆಲ್ಲರೂ ಮುಂಗೆರ್ ಜಿಲ್ಲೆಯ ಕಾಶಿಂಬಜಾರ್ ಪೊಲೀಸ್ ವ್ಯಾಪ್ತಿಯ ನಿವಾಸಿಗಳಾಗಿದ್ದಾರೆ. ಅವರ ಸರಬರಾಜು ಜಾಲ ಮತ್ತು ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ದಂಧೆಯೊಂದಿಗಿನ ಸಂಭಾವ್ಯ ಸಂಪರ್ಕಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಕೋಲ್ಕತ್ತ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.