
ಜೈಪುರ: ಎ.ಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಬಗ್ಗೆ ಶನಿವಾರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ‘ಕಾಂಗ್ರೆಸ್ ಪಕ್ಷವು ‘ಮುಸ್ಲಿಂ ಲೀಗ್–ಮಾವೋವಾದಿ ಕಾಂಗ್ರೆಸ್’ ಆಗಿ ಮಾರ್ಪಟ್ಟಿದ್ದು, ಅದು ದೇಶಕ್ಕೆ ಹಾನಿ ಮಾಡುವ ಯಾವುದೇ ಅವಕಾಶವನ್ನೂ ಬಿಟ್ಟುಕೊಡುವುದಿಲ್ಲ’ ಎಂದು ಹೇಳಿದ್ದಾರೆ.
ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ‘ಭಾರತದ ಬಗ್ಗೆ ಮುಸ್ಲಿಂ ಲೀಗ್‌ಗೆ ಇದ್ದ ದ್ವೇಷವೇ ವಿಭಜನೆಗೆ ಕಾರಣವಾಗಿತ್ತು. ಇಂದು ಕಾಂಗ್ರೆಸ್ ಕೂಡ ಅದೇ ರೀತಿಯಲ್ಲಿ ವರ್ತಿಸುತ್ತಿದೆ’ ಎಂದು ಹೇಳಿದ್ದಾರೆ.
‘ಜಗತ್ತು ಭಾರತವನ್ನು ಹೊಗಳಿದರೆ ಭಾರತೀಯರಲ್ಲಿ ಹೆಮ್ಮೆ ಮೂಡುತ್ತದೆ. ಆದರೆ ಕಾಂಗ್ರೆಸ್ ಜಾಗತಿಕ ವೇದಿಕೆಗಳಲ್ಲಿ ರಾಷ್ಟ್ರವನ್ನು ಅವಮಾನಿಸಲು ಪ್ರಯತ್ನಿಸುತ್ತದೆ’ ಎಂದು ಮೋದಿ ಹೇಳಿದ್ದಾರೆ.
ಫೆಬ್ರವರಿ 20ರಂದು ಎ.ಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ನ ಕಾರ್ಯಕರ್ತರು ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿತ್ರಗಳಿರುವ ಬಿಳಿ ಟಿ–ಶರ್ಟ್‌ಗಳನ್ನು ಬಿಚ್ಚಿ ಪ್ರತಿಭಟನೆ ನಡೆಸಿದ್ದರು. ಟಿ–ಶರ್ಟ್‌ಗಳಲ್ಲಿ ‘ಭಾರತ–ಅಮೆರಿಕ ವ್ಯಾಪಾರ ಒಪ್ಪಂದ’, ‘ಎಪ್‌ಸ್ಟೈನ್ ಫೈಲ್ಸ್’ ಮತ್ತು ‘ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ’ ಎಂಬ ಘೋಷಣೆಗಳನ್ನು ಬರೆದಿದ್ದರು.
ಪ್ರತಿಭಟನೆಗೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ ಭಾನು ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.