ADVERTISEMENT

ಅಜಿತ್‌ ಪವಾರ್‌ಗೆ ಸೇರಿದ ₹1,400 ಕೋಟಿ ಆಸ್ತಿ ಜಪ್ತಿ

ಮುಂಬೈ, ನವದೆಹಲಿ, ಗೋವಾ, ಪುಣೆಯಲ್ಲಿ ಐಟಿ ದಾಳಿ: ಟಿಎಂಸಿ ನಾಯಕನಿಗೆ ಆಘಾತ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 22:00 IST
Last Updated 2 ನವೆಂಬರ್ 2021, 22:00 IST
ಅಜಿತ್‌ ಪವಾರ್‌
ಅಜಿತ್‌ ಪವಾರ್‌   

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್‌ಪವಾರ್‌ ಹಾಗೂ ಅವರ ಕುಟುಂಬದವರಿಗೆ ಸಂಬಂಧಿಸಿದ್ದು ಎನ್ನಲಾದ, ₹1,400 ಕೋಟಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ್ದಾರೆ.

ಮುಂಬೈ, ನವದೆಹಲಿ, ಗೋವಾ, ಪುಣೆ ಸೇರಿ 24ಕ್ಕೂ ಹೆಚ್ಚು ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು.

1988ರ ಬೇನಾಮಿ ಆಸ್ತಿ ವಹಿವಾಟು ಕಾಯ್ದೆ ಅಡಿಯಲ್ಲಿ, ಪವಾರ್ ಅವರ ಪುತ್ರ ಪಾರ್ಥ ಸೇರಿದಂತೆ, ಪವಾರ್‌ ಕುಟುಂಬದವರ ಈ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಈ ಬೆಳವಣಿಗೆಯು, ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿಗೆ ದಿಗಿಲು ಮೂಡಿಸಿದೆ.

ಮುಂಬೈನ ನರಿಮನ್‌ ಪಾಯಿಂಟ್‌ ಬಳಿ ಇರುವ ನಿರ್ಮಲ್‌ ಟವರ್‌ (₹25 ಕೋಟಿ), ಜರಂದೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ (₹600 ಕೋಟಿ), ದಕ್ಷಿಣ ದೆಹಲಿಯಲ್ಲಿರುವ ಫ್ಲ್ಯಾಟ್‌ (₹20 ಕೋಟಿ), ಗೋವಾದಲ್ಲಿನ ಒಂದು ರೆಸಾರ್ಟ್‌ (₹250 ಕೋಟಿ) ಸೇರಿ, ಸದ್ಯಕ್ಕೆ ಐದು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ನಿರ್ಮಲ್‌ ಟವರ್‌, ಅಜಿತ್‌ ಪವಾರ್‌ ಅವರ ಮಗ ಪಾರ್ಥ ಪವಾರ್‌ ಅವರಿಗೆ ಸೇರಿದ್ದು. ಈ ಎಲ್ಲ ಆಸ್ತಿಯನ್ನು ದಾಖಲೆ ಇಲ್ಲದ ಹಣದಿಂದ ಖರೀದಿಸಿಲ್ಲ ಎಂಬುದನ್ನು ಸಾಬೀತುಪಡಿಸಲು, ಆದಾಯ ತೆರಿಗೆ ಅಧಿಕಾರಿಗಳು90 ದಿನಗಳ ಅವಕಾಶ ನೀಡಿದ್ದಾರೆ.

‘ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಜಿತ್‌ ಪವಾರ್ ಮಗ ಪಾರ್ಥ ಪವಾರ್‌, ಪತ್ನಿ, ತಾಯಿ, ಸೋದರಿಯರು ಹಾಗೂ ಅವರ ಗಂಡನ ಮನೆಯವರ ಅನಧಿಕೃತ ಆಸ್ತಿ ಜಪ್ತಿ ಮಾಡಿದ್ದಾರೆ’ ಎಂದುಮಹಾವಿಕಾಸ್‌ ಅಘಾಡಿ ವಿರುದ್ಧ ಕಿಡಿ ಕಾರುತ್ತಲೇ ಇರುವ ಬಿಜೆಪಿ ನಾಯಕ ಕಿರೀಟ್ ಸೋಮಯ ಟ್ವೀಟ್‌ ಮಾಡಿದ್ದಾರೆ.

ಎನ್‌ಸಿಪಿ ವಕ್ತಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್‌ ಮಲಿಕ್‌ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ಧಾರೆ. ‘ಸಂಬಂಧಿಕರ ಆಸ್ತಿಯನ್ನೂ ಪವಾರ್‌ ಅವರ ಆಸ್ತಿ ಎಂದು ಹೇಳುತ್ತಿರುವುದು ಸರಿಯಲ್ಲ. ಮಹಾವಿಕಾಸ್‌ ಅಘಾಡಿ ಹಾಗೂ ಅದರ ನಾಯಕರನ್ನು ಗುರಿಯಾಗಿಸಿಕೊಂಡು ಈ ಕೆಲಸ ನಡೆಯುತ್ತಿದೆ’ ಎಂದಿದ್ದಾರೆ.

ಕಳೆದ ತಿಂಗಳು, ಪವಾರ್‌ ಅವರ ಸೋದರಿಯರ ಮನೆ ಹಾಗೂ ಕಂಪನಿಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ದಾಖಲೆ ಇಲ್ಲದ ₹ 184 ಕೋಟಿ ಮುಟ್ಟುಗೋಲು ಹಾಕಿಕೊಂಡಿದ್ದರು.

ಅನಿಲ್‌ ದೇಶಮುಖ್‌ ನ.6ರವರೆಗೆ ಇ.ಡಿ ವಶಕ್ಕೆ:

ಹಣಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾದ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರನ್ನು ಇದೇ 6ರವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ಒಪ್ಪಿಸಲಾಗಿದೆ.

ಪೊಲೀಸ್ ಇಲಾಖೆಯಲ್ಲಿ ಪ್ರತಿ ತಿಂಗಳು ₹ 100 ಕೋಟಿ ಲಂಚ ವಸೂಲಿ ಹಾಗೂ ಅಧಿಕಾರ ದುರ್ಬಳಕೆ ಆರೋಪದಲ್ಲಿ, ದೇಶಮುಖ್‌ ಅವರನ್ನು ಜಾರಿ ನಿರ್ದೇಶನಾಲಯ ಸೋಮವಾರ ತಡರಾತ್ರಿ ಬಂಧಿಸಿತ್ತು. ರಜಾಕಾಲದ ನ್ಯಾಯಾಲಯದ ಮುಂದೆ ಮಂಗಳವಾರ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 14 ದಿನಗಳವರೆಗೆ ತನ್ನ ವಶಕ್ಕೆ ನೀಡುವಂತೆ ಮನವಿ ಮಾಡಿತ್ತು.

ಆದರೆ, ನ್ಯಾಯಾಲಯವು ಐದು ದಿನಗಳವರೆಗೆ ಇ.ಡಿ ವಶಕ್ಕೆ ನೀಡಿ ಆದೇಶಿಸಿತು.

ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್‌ಬೀರ್‌ ಸಿಂಗ್‌ ಅವರು ದೇಶಮುಖ್‌ ವಿರುದ್ಧ ₹ 100 ಕೋಟಿ ಹಫ್ತಾ ಪಡೆದ ಆರೋಪ ಮಾಡಿದ್ದರು. ಆ ನಂತರದಲ್ಲಿ, ದೇಶಮುಖ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ದೇಶಮುಖ್‌ ಬಂಧನವನ್ನು ರಾಜಕೀಯ ಪ್ರೇರಿತ ಎಂದಿರುವ ಮಹಾ ವಿಕಾಸ್‌ ಅಘಾಡಿಯ ನಾಯಕರು, ತನ್ನನ್ನು ವಿರೋಧಿಸುವ ಈ ಮೈತ್ರಿಕೂಟವನ್ನು ಅಸ್ಥಿರಗೊಳಿಸುವುದಕ್ಕಾಗಿ ಬಿಜೆಪಿ ಇಂಥ ಕೃತ್ಯಕ್ಕೆ ಮುಂದಾಗಿದೆ ಎಂದಿದ್ದಾರೆ.

ಆರೋಪ ಮಾಡಿರುವ ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪರಮ್‌ಬೀರ್‌ ಸಿಂಗ್‌ ಎಲ್ಲಿದ್ದಾರೆ ಎಂಬುದನ್ನು ಬಿಜೆಪಿ ಹೇಳಲಿ ಎಂದೂ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.