ADVERTISEMENT

ಸೈಬರ್ ದಾಳಿಗೆ ಹೆಚ್ಚು ಗುರಿಯಾದ ರಾಷ್ಟ್ರಗಳಲ್ಲಿ ಭಾರತಕ್ಕೆ 2ನೇ ಸ್ಥಾನ: CloudSEK

ಪಿಟಿಐ
Published 2 ಜನವರಿ 2025, 15:19 IST
Last Updated 2 ಜನವರಿ 2025, 15:19 IST
<div class="paragraphs"><p>ಸೈಬರ್ ದಾಳಿ ಸಾಂದರ್ಭಿಕ ಚಿತ್ರ</p></div>

ಸೈಬರ್ ದಾಳಿ ಸಾಂದರ್ಭಿಕ ಚಿತ್ರ

   

ನವದೆಹಲಿ: ಜಗತ್ತಿನಲ್ಲಿ ಅತಿ ಹೆಚ್ಚು ಸೈಬರ್ ದಾಳಿಗೆ ಗುರಿಯಾದ ರಾಷ್ಟ್ರಗಳಲ್ಲಿ ಭಾರತ 2ನೇ ಸ್ಥಾನದಲ್ಲಿದ್ದು, 2024ರಲ್ಲಿ ದೇಶದ ಒಟ್ಟು 95 ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಿ ಮಾಹಿತಿ ಕದಿಯುವ ಪ್ರಯತ್ನಗಳು ನಡೆದಿವೆ ಎಂದು ಸೈಬರ್‌ ಗುಪ್ತಚರ ಸಂಸ್ಥೆಯಾದ ಕ್ಲೌಡ್‌ಸೆಕ್‌ ತನ್ನ ವರದಿಯಲ್ಲಿ ಹೇಳಿದೆ.

ಡಾರ್ಕ್‌ ವೆಬ್‌ ಮಾಹಿತಿ ಆಧರಿಸಿ ಕಂಪನಿ ಹೊರತಂದಿರುವ ‘ಥ್ರೆಟ್‌ಲ್ಯಾಂಡ್‌ಸ್ಕೇಪ್‌ ವರದಿ 2024’ ಎಂಬ ವರದಿಯಲ್ಲಿ ಈ ಅಂಶವನ್ನು ಹೇಳಿದೆ.

ADVERTISEMENT

140 ದಾಳಿಗಳಿಗೆ ತುತ್ತಾಗಿರುವ ಅಮೆರಿಕ, ಜಗತ್ತಿನಲ್ಲಿ ಅತಿ ಹೆಚ್ಚು ಸೈಬರ್ ದಾಳಿಗೆ ಒಳಗಾಗಿರುವ ರಾಷ್ಟ್ರಗಳಲ್ಲಿ ಮೊದಲ ಸ್ಥಾನದಲ್ಲಿದೆ. 57 ದಾಳಿಗೆ ತುತ್ತಾದ ಇಸ್ರೇಲ್ ಮೂರನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

‘ಸೈಬರ್ ದಾಳಿಕೋರರು ಭಾರತದ ವಿವಿಧ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಇದರಲ್ಲಿ ಹಣಕಾಸು, ಬ್ಯಾಂಕಿಂಗ್ ಕ್ಷೇತ್ರ ಅತಿ ಹೆಚ್ಚು. ಭಾರತದಲ್ಲಿ ನಡೆದ ಒಟ್ಟು 95 ದಾಳಿಗಳಲ್ಲಿ ಈ ಎರಡು ಕ್ಷೇತ್ರಗಳ ಮೇಲೆ ನಡೆದ ದಾಳಿಯ ಸಂಖ್ಯೆ 20. ಸರ್ಕಾರಿ ಸ್ವಾಮ್ಯ ಸಂಸ್ಥೆಗಳ ಮೇಲೆ 13 ಬಾರಿ ನಡೆದಿದೆ. ದೂರಸಂಪರ್ಕ ಕ್ಷೇತ್ರದ ಮೇಲೆ 12, ಆರೋಗ್ಯ ಹಾಗೂ ಔಷಧ ಕ್ಷೇತ್ರದಲ್ಲಿ 10 ಹಾಗೂ ಶಿಕ್ಷಣ ಕ್ಷೇತ್ರದಲ್ಲಿ 9 ಬಾರಿ ದಾಳಿ ನಡೆದಿದೆ’ ಎಂದಿದ್ದಾರೆ.

ಸೈಬರ್ ದಾಳಿ ನಡೆಸುವ ಹೈಟೆಕ್ ಗುಂಪು ಭಾರತದ ನಾಗರಿಕರಿಗೆ ಸಂಬಂಧಿಸಿದ ಸುಮಾರು 85 ಕೋಟಿ ದಾಖಲೆಯನ್ನು ದೋಚಿದ್ದಾರೆ. ಸ್ಟಾರ್ ಹೆಲ್ತ್‌ ಹಾಗೂ ಅದಕ್ಕೆ ಹೊಂದಿಕೊಂಡಂತೆ ವಿಮೆ ಪಡೆದ ಗ್ರಾಹಕರ ಮಾಹಿತಿ, ದೂರಸಂಪರ್ಕ ಕನ್ಸಲ್ಟೆಂಟ್ಸ್‌ಗೆ ಸೇರಿದ 2 ಟೆರಾಬೈಟ್‌ನಷ್ಟು ಮಾಹಿತಿ ಕಳ್ಳತನವಾಗಿದೆ. 108 ರ‍್ಯಾನ್‌ಸಮ್‌ವೇರ್‌ ಘಟನೆಗಳು ದೇಶದಲ್ಲಿ ನಡೆದಿದೆ.

‘ಭಾರತದಲ್ಲಿ ಲಾಕ್‌ಬಿಟ್‌ ಎಂಬ ಸಂಘಟನೆ ಇಂಥ ರ‍್ಯಾನ್‌ಸಮ್‌ ಸಮೂಹಗಳಲ್ಲಿ ಮುಂಚೂಣಿಯಲ್ಲಿದೆ. ಸುಮಾರು 20 ದಾಳಿಗಳನ್ನು ಈ ಗುಂಪೇ ನಡೆಸಿದೆ. ಕಿಲ್‌ಸೆಕ್‌ ಎಂಬ ಗುಂಪು 15 ಸಂಸ್ಥೆಯನ್ನು ಗುರಿಯಾಗಿಸಿ ದಾಳಿ ನಡೆಸಿದೆ. ರ‍್ಯಾನ್‌ಸಮ್‌ಹಬ್‌ ಎಂಬ ರ‍್ಯಾನ್‌ಸಮ್‌ವೇರ್‌ 12 ದಾಳಿ ನಡೆಸಿದೆ’ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.