
ನವದೆಹಲಿ: ಸೇನೆಯ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ಅನಗತ್ಯವಾಗಿ ತರಾಟೆಗೆ ತೆಗೆದುಕೊಂಡಿದೆ ಎಂದು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಹೇಳಿವೆ.
‘ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಿಗೆ ಪ್ರತಿಕ್ರಿಯಿಸುವುದು ರಾಜಕೀಯ ಪಕ್ಷಗಳ ಜವಾಬ್ದಾರಿ’ ಎಂದಿವೆ.
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಭಾರತೀಯ ಸೇನೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
‘ಇಂಡಿಯಾ’ ಮೈತ್ರಿಕೂಟದ ಹಲವು ಪಕ್ಷಗಳ ಮುಖಂಡರು ಹಾಗೂ ಸದನದ ನಾಯಕರು ಮಂಗಳವಾರ ಇಲ್ಲಿ ನಡೆಸಿದ ಸಭೆಯಲ್ಲಿ ರಾಹುಲ್ ವಿರುದ್ಧ ಸುಪ್ರೀಂ ಕೋರ್ಟ್‌ನ ವ್ಯಾಖ್ಯಾನದ ಬಗ್ಗೆ ಚರ್ಚಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಹ ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಅಸಾಧಾರಣ ಅವಲೋಕನ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಹಕ್ಕುಗಳ ಬಗ್ಗೆಯೇ ನ್ಯಾಯಮೂರ್ತಿಗಳು ಅನಗತ್ಯವಾಗಿ ಅಸಾಧಾರಣವಾದ ಅವಲೋಕನ ನಡೆಸಿದ್ದಾರೆ ಎಂಬುದನ್ನು ‘ಇಂಡಿಯಾ’ ಮೈತ್ರಿಕೂಟದ ಎಲ್ಲ ನಾಯಕರು ಒಪ್ಪಿಕೊಂಡಿದ್ದಾರೆ’ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.
‘ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ಪ್ರತಿಕ್ರಿಯಿಸುವುದು ರಾಜಕೀಯ ಪಕ್ಷಗಳ ಅದರಲ್ಲೂ ವಿರೋಧ ಪಕ್ಷದ ನಾಯಕನ ಮಹತ್ವದ ಜವಾಬ್ದಾರಿ’ ಎಂದಿದೆ.
‘ದೇಶದ ಗಡಿಯನ್ನು ರಕ್ಷಿಸುವಲ್ಲಿ ನಮ್ಮ ಸರ್ಕಾರವು ವಿಫಲವಾದಾಗ ಅದನ್ನು ಹೊಣೆಗಾರರನ್ನಾಗಿ ಮಾಡುವುದು ಪ್ರತಿಯೊಬ್ಬ ನಾಗರಿಕರ ನೈತಿಕ ಕರ್ತವ್ಯ’ ಎಂದೂ ಹೇಳಿದೆ.
ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂಧಿ ಅವರು ಭಾರತೀಯ ಸೇನಾ ಪಡೆಗಳನ್ನು ಗೌರವಿಸುತ್ತಾರೆ ಮತ್ತು ವಿರೋಧ ಪಕ್ಷದ ನಾಯಕರಾಗಿ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಹೊಂದಿದ್ದಾರೆ ಎಂದಿದೆ.
ತಪ್ಪು ವ್ಯಾಖ್ಯಾನ: ಪ್ರಿಯಾಂಕಾ
‘ನೈಜ ಭಾರತೀಯ ಯಾರು ಎಂಬುದನ್ನು ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳು ನಿರ್ಧರಿಸುವುದಲ್ಲ’ ಎಂದು ಕಾಂಗ್ರೆಸ್‌ನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಸತ್ ಆವರಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ‘ಪ್ರಶ್ನೆಗಳನ್ನು ಕೇಳುವುದು ಸರ್ಕಾರಕ್ಕೆ ಸವಾಲು ಹಾಕುವುದು ವಿರೋಧ ಪಕ್ಷದ ನಾಯಕನ ಕರ್ತವ್ಯ’ ಎಂದು ಹೇಳಿದರು. ‘ನನ್ನ ಸಹೋದರ ಸೇನೆಯ ವಿರುದ್ಧ ಎಂದೂ ಏನನ್ನೂ ಮಾತನಾಡಲ್ಲ. ಸೇನೆಯ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಆದ್ದರಿಂದ ಇದು ತಪ್ಪು ವ್ಯಾಖ್ಯಾನವಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.