ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ಆಫ್ರಿಕಾ ಖಂಡದ ಅಂಗೋಲಾ ದೇಶದ ಸೇನೆಯ ಆಧುನೀಕರಣಕ್ಕೆ ಭಾರತವು 20 ಕೋಟಿ ಡಾಲರ್ (ಸುಮಾರು ₹1,690 ಕೋಟಿ) ಸಾಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರಕಟಿಸಿದ್ದಾರೆ.
ಅಂಗೋಲಾ ಅಧ್ಯಕ್ಷ ಜಾವೊ ಮ್ಯಾನುಯೆಲ್ ಗೊನ್ಸಾಲ್ವೆಸ್ ಲಾರೆನ್ಸೊ ಜತೆಗೆ ಇಲ್ಲಿ ನಡೆದ ಮಾತುಕತೆ ಬಳಿಕ ಅವರು ಈ ಘೋಷಣೆ ಮಾಡಿದ್ದಾರೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರವೂ ಸೇರಿದಂತೆ ಒಟ್ಟಾರೆ ದ್ವಿಪಕ್ಷೀಯ ಸಂಬಂಧ ಬಲಪಡಿಸುವುದರ ಬಗ್ಗೆ ಉಭಯ ದೇಶಗಳ ನಾಯಕರು ಚರ್ಚಿಸಿದರು.
ಲಾರೆನ್ಸೊ ಅವರ ಭಾರತ ಭೇಟಿಯು ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ದಿಕ್ಕನ್ನು ನೀಡುವುದಲ್ಲದೆ ಭಾರತ-ಆಫ್ರಿಕಾ ಪಾಲುದಾರಿಕೆಯನ್ನು ಬಲಪಡಿಸಲಿದೆ ಎಂದು ಪ್ರಧಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಅಂಗೋಲಾದ ರಕ್ಷಣಾ ಪಡೆಗಳ ಆಧುನೀಕರಣವನ್ನು ಬೆಂಬಲಿಸಲು 20 ಕೋಟಿ ಡಾಲರ್ ರಕ್ಷಣಾ ಸಾಲವನ್ನು ಘೋಷಿಸಲು ನನಗೆ ಸಂತಸವಾಗಿದೆ’ ಎಂದು ಹೇಳಿದರು.
ರಕ್ಷಣಾ ಪರಿಕರಗಳ ದುರಸ್ತಿ, ಕೂಲಂಕಷ ಪರೀಕ್ಷೆ ಮತ್ತು ಪೂರೈಕೆ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.
‘ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಕೌಶಲಾಭಿವೃದ್ಧಿ ಕ್ಷೇತ್ರಗಳಲ್ಲಿ ಭಾರತವು ತನ್ನ ಸಾಮರ್ಥ್ಯವನ್ನು ಅಂಗೋಲಾದೊಂದಿಗೆ ಹಂಚಿಕೊಳ್ಳಲಿದೆ. ಆರೋಗ್ಯ ರಕ್ಷಣೆ, ವಜ್ರ ಸಂಸ್ಕರಣೆ, ರಸಗೊಬ್ಬರ ಮತ್ತು ಖನಿಜ ಕ್ಷೇತ್ರಗಳಲ್ಲಿ ನಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದ್ದೇವೆ’ ಎಂದರು.
‘ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದರು. ಭಾರತ ಮತ್ತು ಆಫ್ರಿಕನ್ ಒಕ್ಕೂಟದ ನಡುವಿನ ಸಂಬಂಧದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, ‘ನಾವು ಪ್ರಗತಿಯಲ್ಲಿ ಪಾಲುದಾರರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.