ಪಟ್ನಾ: ‘ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ (ಎಸ್‌ಐಆರ್) ಪ್ರಕ್ರಿಯೆ ಕುರಿತು ವಿರೋಧ ಪಕ್ಷಗಳ ಆಕ್ಷೇಪಣೆಗಳನ್ನು ಚುನಾವಣಾ ಆಯೋಗ ಪರಿಗಣಿಸಬೇಕು. ಇಲ್ಲದಿದ್ದರೆ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ನ್ಯಾಯಾಂಗದ ಬಾಗಿಲು ತಟ್ಟಬೇಕಾಗುತ್ತದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ತಿಳಿಸಿದರು.
ಕೇಂದ್ರದ ಎನ್‌ಡಿಎ ಸರ್ಕಾರವು ಸಮಗ್ರ ಪರಿಷ್ಕರಣೆಯ ನೆಪದಲ್ಲಿ ಬಡವರು, ಬುಡಕಟ್ಟು ಜನರು, ಯುವ, ಪ್ರವಾಹ ಪೀಡಿತ, ವಲಸೆ ಬಂದವರು ಹಾಗೂ ವಿವಿಧ ರೀತಿಯಲ್ಲಿ ತುಳಿತಕ್ಕೆ ಒಳಗಾದ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಹುನ್ನಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
‘ಈ ಸಂಬಂಧ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಅಲ್ಲದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಚರ್ಚಿಸುವಂತೆಯೂ ಲಾಲು ಅವರನ್ನು ಕೋರಿದ್ದೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಚುನಾವಣಾ ಆಯೋಗವು 25 ದಿನಗಳಲ್ಲಿ ರಾಜ್ಯದ ಎಂಟು ಕೋಟಿಗೂ ಹೆಚ್ಚು ಮತದಾರರ ಮನೆ– ಮನೆಗೆ ಭೇಟಿ ನೀಡಿ ಸಮಗ್ರ ಪರಿಷ್ಕರಣಾ ಕಾರ್ಯ ಕೈಗೊಳ್ಳಲು ಸಾಧ್ಯವಾ ಎಂದು ಅವರು ಇದೇ ವೇಳೆ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.