ಸಂಸತ್ ಆವರಣದಲ್ಲಿ ವಿಪಕ್ಷ ನಾಯಕರ ಪ್ರತಿಭಟನೆ
(ಪಿಟಿಐ ಚಿತ್ರ)
ನವದೆಹಲಿ: ಉದ್ಯಮಿ ಗೌತಮ್ ಅದಾನಿ ವಿರುದ್ಧದ ದೋಷಾರೋಪಣೆ ವಿಷಯಕ್ಕೆ ಸಂಬಂಧಿಸಿದಂತೆ 'ಇಂಡಿಯಾ' ಮೈತ್ರಿಕೂಟದ ಪಕ್ಷಗಳ ನಾಯಕರು ಇಂದು (ಬುಧವಾರ) ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಅದಾನಿ ಪ್ರಕರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಬೇಕು ಎಂದು ವಿರೋಧ ಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ.
'ಮೋದಿ-ಅದಾನಿ ಒಂದೇ' ಎಂಬ ಬ್ಯಾನರ್ ಹಿಡಿದುಕೊಂಡು ವಿಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್, ಎಎಪಿ, ಆರ್‌ಜೆಡಿ, ಶಿವಸೇನಾ (ಯುಬಿಟಿ), ಡಿಎಂಕೆ ಮತ್ತು ಎಡಪಕ್ಷಗಳ ಸಂಸದರು ಘೋಷಣೆಗಳನ್ನು ಕೂಗಿದರು. ಆದರೆ ವಿಪಕ್ಷಗಳ ಪ್ರತಿಭಟನೆಯಿಂದ ಟಿಎಂಸಿ ದೂರ ಉಳಿದುಕೊಂಡಿತು.
ಕಾಂಗ್ರೆಸ್ ನಿಯೋಗದೊಂದಿಗೆ ಸಂಭಲ್‌ಗೆ ತೆರಳಿರುವ ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ.
ಸುರಕ್ಷತೆ ಹಾಗೂ ಭದ್ರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಂಸತ್ತಿನ ಗೇಟ್‌ಗಳ ಮುಂದೆ ಪ್ರತಿಭಟನೆ ನಡೆಸಬಾರದು ಎಂದು ಸಂಸದರಿಗೆ ಲೋಕಸಭೆ ಕಾರ್ಯಾಲಯ ಮಂಗಳವಾರ ಸಲಹೆ ನೀಡಿತ್ತು. ಇದೇ ಜಾಗದಲ್ಲಿ ಮಂಗಳವಾರವೂ ವಿಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.