ADVERTISEMENT

ಇಂಡಿಯಾ ಮೈತ್ರಿಕೂಟದ ಭವಿಷ್ಯದ ಕಾರ್ಯತಂತ್ರ ಬೇಗ ಸಿದ್ಧವಾಗಬೇಕು: ನಿತೀಶ್ ಕುಮಾರ್

‘ಇಂಡಿಯಾ’ ಮೈತ್ರಿಕೂಟದ ಸೀಟು ಹಂಚಿಕೆ ತ್ವರಿತವಾಗಿ ಆಗಲಿ- ಬಿಹಾರ ಸಿ.ಎಂ

ಪಿಟಿಐ
Published 6 ಡಿಸೆಂಬರ್ 2023, 14:51 IST
Last Updated 6 ಡಿಸೆಂಬರ್ 2023, 14:51 IST
ನಿತೀಶ್ ಕುಮಾರ್
ನಿತೀಶ್ ಕುಮಾರ್   

ಪಟ್ನಾ: ‘ಇಂಡಿಯಾ’ ಮೈತ್ರಿಕೂಟವು ತನ್ನ ಮುಂದಿನ ಕಾರ್ಯತಂತ್ರವನ್ನು ಅಂತಿಮಗೊಳಿಸಲು ತಕ್ಷಣ ಮುಂದಡಿ ಇರಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಅಲ್ಲದೆ, ಹಿಂದಿ ಭಾಷಿಕ ಮೂರು ರಾಜ್ಯಗಳಲ್ಲಿ ಬಿಜೆಪಿ ಸಾಧಿಸಿರುವ ಭರ್ಜರಿ ಗೆಲುವಿನ ಬಗ್ಗೆ ‘ಬಹಳ ಚರ್ಚೆ ಮಾಡುವ ಅಗತ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ತಿಂಗಳ ಮೂರನೆಯ ವಾರದಲ್ಲಿ ನಡೆಯಲಿರುವ ‘ಇಂಡಿಯಾ’ ಮೈತ್ರಿಕೂಟದ ಸಭೆಯ ಕಡೆ ತಮ್ಮ ಗಮನ ಇರುವುದಾಗಿ ನಿತೀಶ್‌  ಹೇಳಿದ್ದಾರೆ.

‘ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಕಾಂಗ್ರೆಸ್ ಒಳ್ಳೆಯ ಸಾಧನೆ ತೋರಿದೆ. ಚುನಾವಣಾ ರಾಜಕೀಯದಲ್ಲಿ ಇವೆಲ್ಲ ಇದ್ದಿದ್ದೇ. ಇಲ್ಲಿ ಕೆಲವು ರಾಜ್ಯಗಳಲ್ಲಿ ಮೊದಲು ಕಾಂಗ್ರೆಸ್ ಆಡಳಿತವಿತ್ತು. ಈಗ ಬಿಜೆಪಿ ಜಯಗಳಿಸಿದೆ. ಇಂಥವುಗಳ ಬಗ್ಗೆ ಬಹಳ ಚರ್ಚಿಸುವ ಅಗತ್ಯವಿಲ್ಲ. ಈ ಬಾರಿ ಕಾಂಗ್ರೆಸ್ ತೆಲಂಗಾಣದಲ್ಲಿ ಗೆದ್ದಿದೆ’ ಎಂದು ನಿತೀಶ್ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ADVERTISEMENT

‘ಇಂಡಿಯಾ ಮೈತ್ರಿಕೂಟವು ಮುಂದಿನ ಸಭೆಯಲ್ಲಿ ಸೀಟು ಹಂಚಿಕೆ ಸೇರಿದಂತೆ ಭವಿಷ್ಯದ ಕಾರ್ಯತಂತ್ರವನ್ನು ತ್ವರಿತವಾಗಿ ಅಂತಿಮಗೊಳಿಸಬೇಕು ಎಂಬುದು ನನ್ನ ಬಯಕೆ’ ಎಂದು ಅವರು ಹೇಳಿದರು. ‘ಇಂಡಿಯಾ’ ಮೈತ್ರಿಕೂಟದ ಮುಂದಿನ ಸಭೆಗೆ ತಾವು ಹಾಜರಾಗುವುದಾಗಿ ನಿತೀಶ್ ತಿಳಿಸಿದರು.

ಸೀಟು ಹಂಚಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ಆಗಲಿದೆ, ಇತರ ಹಲವು ಕಾರ್ಯತಂತ್ರಗಳನ್ನು ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದರು. ‘2024ರ ಲೋಕಸಭಾ ಚುನಾವಣೆಗೂ ಮೊದಲು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವುದು ನನ್ನ ಬಯಕೆ. ವೈಯಕ್ತಿಕವಾಗಿ ಯಾವುದೇ ಆಸೆ ಇಲ್ಲ. ಆದರೆ ಎಲ್ಲವನ್ನೂ ಆದಷ್ಟು ಬೇಗ ಅಂತಿಮಗೊಳಿಸಬೇಕು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.