ಭಾರತಕ್ಕೆ ಭೇಟಿ ನೀಡಿರುವ ಕೆನಡಾ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರೊಂದಿಗೆ ಸಚಿವ ಎಸ್.ಜೈಶಂಕರ್ ಸೋಮವಾರ ಸಂವಾದ ನಡೆಸಿದರು
ಪಿಟಿಐ ಚಿತ್ರ
ನವದೆಹಲಿ: ‘ವ್ಯಾಪಾರ, ಹೂಡಿಕೆ, ಗಣಿ, ಇಂಧನ ಸೇರಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ಒಪ್ಪಂದಗಳನ್ನು ಬಲಪಡಿಸಲು ಉಭಯ ರಾಷ್ಟ್ರಗಳು ಮಹತ್ವಾಕಾಂಕ್ಷೆಯ ರೂಪುರೇಷೆಗಳನ್ನು ಸಿದ್ಧಪಡಿಸಿವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸೋಮವಾರ ಹೇಳಿದ್ದಾರೆ.
ಭಾರತ ಪ್ರವಾಸ ಕೈಗೊಂಡಿರುವ ಕೆನಡಾ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರ ಜತೆಗಿನ ಮಾತುಕತೆ ಬಳಿಕ ಆ ಬಗ್ಗೆ ಮಾಧ್ಯಮಗಳಿಗೆ ಜೈಶಂಕರ್ ಮಾಹಿತಿ ನೀಡಿದ್ದಾರೆ.
‘ಕಳೆದ ಕೆಲವು ತಿಂಗಳಲ್ಲಿ ಭಾರತ ಮತ್ತು ಕೆನಡಾ ನಡುವಿನ ಸಂಬಂಧವು ವೃದ್ಧಿಸುತ್ತಿದ್ದು, ಈ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವುದಕ್ಕೆ ಅಗತ್ಯವಾಗಿರುವ ಕಾರ್ಯವಿಧಾನಗಳನ್ನು ಮರು ರೂಪಿಸಲು ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.
ಅಲ್ಲದೇ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲೂ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಮೋದಿ ಜತೆಗೆ ಮಾತುಕತೆ
ಮೂರು ದೇಶಗಳ ಪ್ರವಾಸದ ನಿಮಿತ್ತ ಭಾರತಕ್ಕೆ ಭೇಟಿ ನೀಡಿರುವ ಕೆನಡಾ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿದ್ದಾರೆ.
ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ವೃದ್ಧಿಗೊಳಿಸಲು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಪ್ರಧಾನಿ ಜತೆಗೆ ಚರ್ಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿ–7 ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಪ್ರಧಾನಿ ಮೋದಿ ಅವರು ಜೂನ್‌ನಲ್ಲಿ ಕೆನಡಾಗೆ ಭೇಟಿ ನೀಡಿದ್ದರು. ಆ ಸಂದರ್ಭವನ್ನು ಅನಿತಾ ಅವರ ಜತೆಗಿನ ಮಾತುಕತೆಯ ವೇಳೆ ಮೋದಿ ಸ್ಮರಿಸಿದ್ದಾರೆ ಎಂದೂ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.