ADVERTISEMENT

Yoga Day 2025: ದೇಶದ ಎಲ್ಲೆಡೆ ‘ಯೋಗಾ’ಯೋಗ

ದೇಶದ ವಿವಿಧೆಡೆ ಅಂತರರಾಷ್ಟ್ರೀಯ ಯೋಗ ದಿನ ಆಚರಣೆ | ಪ್ರಧಾನಿ, ಪ್ರಮುಖ ಗಣ್ಯರು ಭಾಗಿ

ಪಿಟಿಐ
Published 21 ಜೂನ್ 2025, 14:11 IST
Last Updated 21 ಜೂನ್ 2025, 14:11 IST
<div class="paragraphs"><p>ಭಾರತೀಯ ನೌಕಾಪಡೆ ಯೋಧರು ದೇಶದ ವಿವಿಧ ಕೇಂದ್ರಗಳಲ್ಲಿ ಶನಿವಾರ ಯೋಗ ದಿನ ನಿಮಿತ್ತ ಸಾಮೂಹಿಕ ಯೋಗಾಭ್ಯಾಸ ನಡೆಸಿದರು.</p></div>

ಭಾರತೀಯ ನೌಕಾಪಡೆ ಯೋಧರು ದೇಶದ ವಿವಿಧ ಕೇಂದ್ರಗಳಲ್ಲಿ ಶನಿವಾರ ಯೋಗ ದಿನ ನಿಮಿತ್ತ ಸಾಮೂಹಿಕ ಯೋಗಾಭ್ಯಾಸ ನಡೆಸಿದರು.

   

ನವದೆಹಲಿ: ಜಗತ್ತಿಗೇ ಯೋಗದ ಅನುಭೋಗ, ಮಹತ್ವದ ಅರಿವು ಹಂಚಿದ ಭಾರತದ ವಿವಿಧೆಡೆ ಶನಿವಾರ ಅಂತರರಾಷ್ಟ್ರೀಯ ಯೋಗದಿನವನ್ನು ಸಾಮೂಹಿಕವಾಗಿ, ಸಂಭ್ರಮದಿಂದ ಆಚರಿಸಲಾಯಿತು. 

ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರು, ವಿದ್ಯಾರ್ಥಿಗಳು, ಸಾರ್ವಜನಿಕರು, ಶ್ರಮಿಕರು, ವೈದ್ಯರು ಹೀಗೆ ವಿವಿಧ ವರ್ಗಗಳ ಜನಗಣ ದೇಶದ ಉದ್ದಗಲಕ್ಕೂ ಬೆಳಿಗ್ಗೆಯೇ ಸಾಮೂಹಿಕವಾಗಿ ಯೋಗಾಸಕ್ತರಾದರು.

ADVERTISEMENT

‘ಒಂದು ಭೂಮಿ ಮತ್ತು ಒಂದು ಆರೋಗ್ಯಕ್ಕಾಗಿ ಯೋಗ’ ಎಂಬುದು ಈ ವರ್ಷದ ಧ್ಯೇಯವಾಕ್ಯವಾಗಿತ್ತು.

ಆಂಧ್ರಪ್ರದೇಶದ ವಿಶಾಖಪಟ್ಟಣದ ಆರ್.ಕೆ.ಬೀಚ್‌ನಲ್ಲಿ ನಡೆದ ಸಾಮೂಹಿಕ ಯೋಗ ದಿನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ವೇತವಸ್ತ್ರ ಧರಿಸಿ ಪಾಲ್ಗೊಂಡರು.

‘ಉಸಿರಾಟ, ಸಮತೋಲನ, ಎಲ್ಲರೂ ಒಗ್ಗೂಡಲು ಯೋಗ ಎಂಬುದು ಪ್ರಸಕ್ತ ಕಾಲದ ಒತ್ತುಗುಂಡಿಯಾಗಿದೆ. ಶಾಂತಿ ಜಾಗತಿಕ ನೀತಿಯಾಗಲಿ, ಯೋಗ ಇದಕ್ಕೆ ನಾಂದಿಯಾಗಲಿ’ ಎಂದು ಪ್ರಾರ್ಥಿಸುತ್ತೇನೆ’ ಎಂದರು.

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್ ಸೇರಿ ರಾಜ್ಯದ ಹಲವು ಪ್ರಮುಖರು ಈ ಸಂದರ್ಭದಲ್ಲಿ ಭಾಗಿಯಾದರು.  

ಡೆಹ್ರಾಡೂನ್‌ನಲ್ಲಿ ರಾಷ್ಟ್ರಪತಿ ಯೋಗ:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಯೋಗವನ್ನು ನಿತ್ಯದ ಆಚರಣೆಯಾಗಿಸಿಕೊಳ್ಳಬೇಕು’ ಎಂದು ಮುರ್ಮು ಈ ಸಂದರ್ಭದಲ್ಲಿ ಸಲಹೆ ಮಾಡಿದರು.

ಯೋಧರಿಂದ ಯೋಗ, ಸಚಿವರ ಸಾಥ್:

ಸಿಯಾಚಿನ್‌ನಲ್ಲಿ ಎತ್ತರದಲ್ಲಿರುವ ಹಿಮನದಿಯ ಪ್ರದೇಶದಿಂದ ವಿಶಾಖಪಟ್ಟಣದ ನೌಕಾನೆಲೆಯವರೆಗೂ ವಿವಿಧೆಡೆ ಯೋಧರು ಯೋಗ ದಿನ ಆಚರಿಸಿದರು. 

ಜಮ್ಮು ಕಾಶ್ಮೀರದಲ್ಲಿ ಯೋಧರ ಜೊತೆಗೂಡಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯೋಗಾಭ್ಯಾಸ ಮಾಡಿದರು. ಸೇನಾಪಡೆಗಳ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರೂ ಸಾಥ್ ನೀಡಿದರು.

ದೇಶದ ವಿವಿಧ ರಾಜ್ಯಗಳ ರಾಜಧಾನಿ ಮತ್ತು ಪ್ರಮುಖ ನಗರಗಳಲ್ಲಿ ನಡೆದ ಯೋಗ ದಿನ ಆಚರಣೆಯಲ್ಲಿ ಕೇಂದ್ರ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು, ನ್ಯಾಯಮೂರ್ತಿಗಳು ಪಾಲ್ಗೊಂಡರು.

ಕರ್ತವ್ಯಪಥದಲ್ಲಿ ಸಚಿವರ ಸಾರಥ್ಯ: 

ರಾಜಧಾನಿಯ ಕರ್ತವ್ಯಪಥದಲ್ಲಿ ನಡೆದ ಯೋಗ ದಿನ ಕಾರ್ಯಕ್ರಮದ ಸಾರಥ್ಯವನ್ನು ಆರೋಗ್ಯ ಸಚಿವ ಜೆ.ಪಿ.ನಡ್ಡಾ ವಹಿಸಿದ್ದರು. ವಿದೇಶಾಂಗ ಸಚಿವ ಎಸ್‌.ಜೈಶಂಕರ್ ವಿವಿಧ ದೇಶಗಳ ರಾಯಭಾರಿಗಳು, ರಾಜತಾಂತ್ರಿಕ ಬಣದ ಸದಸ್ಯರ ಜೊತೆಗೂಡಿ ನೆಹರೂ ಪಾರ್ಕ್‌ನಲ್ಲಿ ಯೋಗ ಮಾಡಿದರು. 

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಹರಿಯಾಣದ ಮುಖ್ಯಮಂತ್ರಿ ನಯಾಬ್‌ ಸಿಂಗ್ ಸೈನಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಬಿಹಾರದ ರಾಜ್ಯಪಾಲ ಆರೀಫ್‌ ಮೊಹಮ್ಮದ್ ಕಾನ್ ಹೀಗೆ ವಿವಿಧ ಗಣ್ಯರು ಆಯಾ ರಾಜ್ಯಗಳಲ್ಲಿ ನಡೆದ ಪ್ರಮುಖ ಕಾರ್ಯಕ್ರಮದಲ್ಲಿ ಭಾಗಿಯಾದರು. ಹರಿಯಾಣದಲ್ಲಿ ಯೋಗಗುರು ರಾಮದೇವ್ ಜೊತೆಯಾದರು.

ಜೂನ್‌ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸುವ ನಿರ್ಣಯವನ್ನು 2014ರ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆ ಕೈಗೊಂಡಿತು. ಈ ಕುರಿತು ಭಾರತದ ಪ್ರಸ್ತಾವವನ್ನು 175 ರಾಷ್ಟ್ರಗಳ ಪ್ರತಿನಿಧಿಗಳು ಅಂದಿನ ಸಭೆಯಲ್ಲಿ ಒಕ್ಕೊರಲಿನಿಂದ ಅನುಮೋದಿಸಿದ್ದರು.

‘ಮಿಲೇನಿಯಲ್ಸ್‌’ಗಳ ಯೋಗ ಪ್ರೀತಿ

ದೇಶದಲ್ಲಿ ಯುವಜನರಲ್ಲಿ ಶೇ 74ರಷ್ಟು ಜನರು ಯೋಗವನ್ನು ನಿತ್ಯದ ಬದುಕಿನ ಭಾಗವಾಗಿ ಅಳವಡಿಸಿಕೊಂಡಿದ್ದಾರೆ. ಐಸಿಐಸಿಐ ಲೊಂಬಾರ್ಡ್‌ ವಿಮಾ ಸಂಸ್ಥೆಯು ಮಹಾ ನಗರ ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. 1000 ಮಂದಿ ಈ ಸಮೀಕ್ಷೆಗೆ ಸ್ಪಂದಿಸಿದ್ದರು ಎಂದು ಸಂಸ್ಥೆಯು ‘ಎಕ್ಸ್‌’ ನಲ್ಲಿ ಪ್ರಕಟಿಸಿದೆ. ಯೋಗ ಒತ್ತಡವನ್ನು ನಿವಾರಿಸುತ್ತದೆ. ಇದು ನಿತ್ಯ ಜೀವನದ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥೆ ಶೀನಾ ಕಪೂರ್ ಅವರು ತಿಳಿಸಿದ್ದಾರೆ.

ನೌಕಾಪಡೆ ನೆಲೆಗಳಲ್ಲಿ ಆಚರಣೆ

ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಪಶ್ಚಿಮ ನೌಕಾ ಕಮಾಂಡ್‌ (ಡಬ್ಲ್ಯೂಎನ್‌ಸಿ) ಶನಿವಾರ ಯೋಗ ದಿನವನ್ನು ಆಚರಿಸಿತು. ನೌಕಾಪಡೆ ರಕ್ಷಣಾ ಇಲಾಖೆಯ 7000ಕ್ಖೂ ಹೆಚ್ಚು ನೌಕರರು ಅವರ ಕುಟುಂಬ ಸದಸ್ಯರು ಯೋಗ ದಿನದಲ್ಲಿ ಭಾಗಹಿಸಿದ್ದರು. ಮುಂಬೈ ಗುಜರಾತ್ ಗೋವ ಕರ್ನಾಟಕದಲ್ಲಿ ಯೋಗ ದಿನ ಆಚರಣೆಗಳು ನಡೆದವು. ಇದರ ಹೊರತಾಗಿ ಆರ್ಟ್‌ ಆಫ್‌ ಲಿವಿಂಗ್ ಭಾರತ್ ಸ್ವಾಭಿಮಾನ ಮಹಿಳಾ ಪತಂಜಲಿ ಯೋಗ ಸಮಿತಿಗಳು ನೌಕಾಪಡೆ ಸಿಬ್ಬಂದಿಗಾಗಿ ಯೋಗ ಕಾರ್ಯಕ್ರಮ ಆಯೋಜಿಸಿದ್ದವು. ಯೋಧರು ಸಿಬ್ಬಂದಿ ಎಂದಿಗೂ ಉತ್ತಮ ದೇಹದಾರ್ಢ್ಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಹೊಂದಿರಬೇಕು ಎಂದು ಬಯಸಲಿದೆ. ಈ ವರ್ಷದಿಂದ ಯೋಗವನ್ನು ಈ ನಿಟ್ಟಿನಲ್ಲಿ ನಿತ್ಯದ ಆಚರಣೆಯಾಗಿ ಅಳವಡಿಕೊಳ್ಳಲು ತೀರ್ಮಾನಿಸಿದ್ದು ಅಗತ್ಯ ತರಬೇತಿ ಆಯೋಜಿಸಲು ನೌಕಾಪಡೆ ನಿರ್ಧರಿಸಿತು.

ಪಾರಂಪರಿಕ ತಾಣಗಳಲ್ಲಿ ಯೋಗ ದಿನ

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎಎಸ್‌ಐ) ಶನಿವಾರ ದೇಶದ ವಿವಿಧ 81 ಪಾರಂಪರಿಕ ತಾಣಗಳಲ್ಲಿ ಯೋಗ ದಿನ ಆಯೋಜಿಸಿತ್ತು. ಗುಜರಾತ್‌ನ ಅದಲಜ್‌ ಕೀ ವಾವ್ ಒಡಿಶಾದ ಕೊನಾರ್ಕ್ ಸೂರ್ಯ ದೇಗುಲ ದೆಹಲಿ ಜಂತರ್‌ ಮಂತರ್ ರಾಜಸ್ಥಾನದ ಮೆಹ್ರಾಘರ್ ಇವುಗಳಲ್ಲಿ ಸೇರಿದ್ದವು. ಕೇಂದ್ರ  ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಸೇರಿ ಹಲವು ಪ್ರಮುಖರು ಭಾಗವಹಿಸಿದ್ದರು. ಪಾರಂಪರಿಕ ತಾಣಗಳು ಎಂದು ಯುನೆಸ್ಕೊ ಪಟ್ಟಿ ಮಾಡಿರುವ ತಾಣಗಳಲ್ಲಿಯೂ ಕಾರ್ಯಕ್ರಮ ಸಂಘಟಿಸಲಾಗಿತ್ತು.  

‘ಯೋಗ ನೀತಿ’ ಪ್ರಕಟಿಸಿದ ಉತ್ತರಾಖಂಡ

ಅಂತರರಾಷ್ಟ್ರೀಯ ಯೋಗ ದಿನವಾದ ಶನಿವಾರ ಉತ್ತರಾಖಂಡ ಸರ್ಕಾರ ಯೋಗ ನೀತಿಯನ್ನು ಪ್ರಕಟಿಸಿತು. ಯೋಗ ನೀತಿ ರೂಪಿಸಿದ ಮೊದಲ ರಾಜ್ಯ ಎಂಬ ಹಿರಿಮೆಗೂ ಪಾತ್ರವಾಯಿತು. ‘ರಾಜ್ಯವನ್ನು ಜಾಗತಿಕವಾಗಿ ‘ದೇಹಾರೋಗ್ಯ ತಾಣ’ವಾಗಿ ರೂಪಿಸುವುದು ಈ ನೀತಿಯ ಉದ್ದೇಶ’ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದರು. ‘ರಾಜ್ಯದಲ್ಲಿ ದೇಹಾರೋಗ್ಯ ರಕ್ಷಣೆ ಮತ್ತು ಯೋಗ ಕೇಂದ್ರ ಸ್ಥಾಪಿಸಲು ₹20 ಲಕ್ಷ ಯೋಗ ಸಂಬಂಧಿತ ಕ್ಷೇತ್ರದಲ್ಲಿ ಸಂಶೋಧನೆಗೆ ₹10 ಲಕ್ಷ ಅನುದಾನ ನೀಡಲಾಗುವುದು ಎಂದರು.  ರಾಜ್ಯದಲ್ಲಿ 2030ರ ವೇಳೆಗೆ ಐದು ಕಡೆ ಯೋಗ ಹಬ್‌ಗಳನ್ನು ಸ್ಥಾಪಿಸುವ ಗುರಿಯನ್ನು ಈ ನೀತಿಯಡಿ ರಾಜ್ಯ ಸರ್ಕಾರ ಹೊಂದಿದೆ ಎಂದು ಪ್ರಕಟಿಸಿದರು. 

‘ಇಡೀ ಜಗತ್ತು ಈಗ ಒಂದು ರೀತಿ ಸಂಘರ್ಷದ ಕಾಲಘಟ್ಟದಲ್ಲಿದೆ. ಇಂತಹ ಹೊತ್ತಿನಲ್ಲಿ ಯೋಗವು ಶಾಂತಿ ಮತ್ತು ಒಗ್ಗಟ್ಟಿನ ಮಾರ್ಗವನ್ನು ತೋರಲಿ.
ನರೇಂದ್ರ ಮೋದಿ, ಪ್ರಧಾನಿ
ಯೋಗ ಎಂಬುದು ಧರ್ಮ ಜಾತಿ ಅಥವಾ ಸಮುದಾಯವನ್ನಷ್ಟೇ ಒಗ್ಗೂಡಿಸುತ್ತಿಲ್ಲ. ಇದು ಆರೋಗ್ಯಕರ ಬದುಕಿನ ಹಾದಿಯಲ್ಲಿ ನಮ್ಮನ್ನು ಮುನ್ನಡೆಸಲಿದೆ.
ದ್ರೌಪದಿ ಮುರ್ಮು, ರಾಷ್ಟ್ರಪತಿ
ಡೆಹ್ರಾಡೂನ್‌ನಲ್ಲಿ ಯೋಗನಿರತ ರಾಷ್ಟ್ರಪತಿ ದ್ರೌಪದಿ ಮುರ್ಮು
ಸೇಲಂನ ಉಕ್ಕು ಸ್ಥಾವರ ಆವರಣದಲ್ಲಿ ಯೋಗ ನಿರತ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಕೊಚ್ಚಿಯಲ್ಲಿ ನಡೆದ ‘ಬೀ ಎ ಹೀರೊ’ ಯೋಗ ಅಭಿಯಾನದಲ್ಲಿ ವಿಶ್ವಶಾಂತಿ ಪ್ರತಿಷ್ಠಾನದ ಸ್ಥಾಪಕ ನಟ ಮೋಹನ್‌ಲಾಲ್‌ ಅವರಿಂದ ಯೋಗ
ಸೇನಾಪಡೆ ಯೋಧರು ಯೋಗ ಭಂಗಿಯಲ್ಲಿಯೇ ‘ಆಪರೇಷನ್ ಸಿಂಧು’ ರೂಪಿಸಿದ ಪರಿ
ರಾಜಧಾನಿಯ ಸಂಸತ್ ಭವನದ ಎದುರು ನಡೆದ ಸಮಾರಂಭದಲ್ಲಿ ಸಚಿವಾಲಯ ಸಿಬ್ಬಂದಿಯಿಂದ ಯೋಗ
ಜೆಡಿಎಸ್‌ ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಂದ ಮನೆಯಲ್ಲಿಯೇ ಯೋಗ
ಅಹಮದಾಬಾದ್‌ನಲ್ಲಿ ಯೋಗ ನಿರತ ಅಮಿತ್ ಶಾ
ವಿಶಾಖಪಟ್ಟಣದಲ್ಲಿ ನಡೆದ ಪ್ರಮುಖ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಯೋಗಾಭ್ಯಾಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.