ADVERTISEMENT

ಲಡಾಖ್‌ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ವಾಯುಪಡೆ ಮುಖ್ಯಸ್ಥ ಬಧೌರಿಯಾ

ಮುಂಚೂಣಿ ನೆಲೆಗಳಿಗೆ ಯುದ್ಧವಿಮಾನಗಳನ್ನು ಕಳುಹಿಸಿದ ವಾಯುಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2020, 9:47 IST
Last Updated 19 ಜೂನ್ 2020, 9:47 IST
ಆರ್.ಕೆ.ಎಸ್.ಬಧೌರಿಯಾ (ಸಂಗ್ರಹ ಚಿತ್ರ)
ಆರ್.ಕೆ.ಎಸ್.ಬಧೌರಿಯಾ (ಸಂಗ್ರಹ ಚಿತ್ರ)   

ನವದೆಹಲಿ: ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್.ಬಧೌರಿಯಾ ಅವರು ಲಡಾಖ್‌ಗೆ ಎರಡು ದಿನಗಳ ಭೇಟಿ ನೀಡಿದ್ದು, ಕಾರ್ಯಾಚರಣೆ ಸಿದ್ಧತೆಯ ಪರಾಮರ್ಶೆ ನಡೆಸಿದ್ದಾರೆ. ಲೇಹ್ ಮತ್ತು ಶ್ರೀನಗರ ವಾಯುನೆಲೆಗಳಿಗೆ ಅವರು ಭೇಟಿ ನೀಡಿದ್ದಾರೆ.

ಇದರ ಬೆನ್ನಲ್ಲೇ, ವಾಯುಪಡೆಯು ಮುಂಚೂಣಿ ನೆಲೆಗಳಿಗೆ ಯುದ್ಧವಿಮಾನಗಳನ್ನು ಕಳುಹಿಸಿಕೊಟ್ಟಿದೆ. ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾ ಪಡೆಗಳ ಜತೆಗಿನ ಸಂಘರ್ಷದಲ್ಲಿ ಸೇನಾಧಿಕಾರಿಯೊಬ್ಬರು ಸೇರಿ 20 ಮಂದಿ ಹುತಾತ್ಮರಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಬಧೌರಿಯಾ ಅವರು ಲೇಹ್‌ಗೆ ಭೇಟಿ ನೀಡಿದ್ದಾರೆ.

ಕಾರ್ಯಾಚರಣೆ ಸಿದ್ಧತೆ ಪರಿಶೀಲನೆಗಾಗಿ ವಾಯುಪಡೆ ಮುಖ್ಯಸ್ಥರು ಲಡಾಖ್‌ಗೆ 2 ದಿನಗಳ ಭೇಟಿ ನೀಡಿದ್ದಾರೆ. ಪೂರ್ವ ಲಡಾಖ್ ಪ್ರದೇಶದಲ್ಲಿ ಚೀನಾ ಪಡೆಗಳ ಆಕ್ರಮಣಕಾರಿ ನೀತಿ ಮತ್ತು ಚೀನಾ 10 ಸಾವಿರಕ್ಕೂ ಹೆಚ್ಚು ಯೋಧರ ನಿಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಬಧೌರಿಯಾ ಅವರು ಅಲ್ಲಿಗೆ ಭೇಟಿ ನೀಡಿದ್ದಾರೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ADVERTISEMENT

ಜೂನ್ 17ರಂದು ಲೇಹ್‌ಗೆ ಭೇಟಿ ನೀಡಿದ್ದ ಬಧೌರಿಯಾ ಜೂನ್ 18ರಂದು ಶ್ರೀನಗರ ವಾಯುನೆಲೆಗೆ ತೆರಳಿದ್ದಾರೆ. ಇವೆರಡೂ ವಾಯುನೆಲೆಗಳು ಪೂರ್ವ ಲಡಾಖ್‌ಗೆ ಸನಿಹದ್ದಾಗಿವೆ. ಪೂರ್ವ ಲಡಾಖ್‌ನ ಪರ್ವತಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಇವೆರಡೂ ವಾಯುನೆಲೆಗಳಲ್ಲಿ ಸಿದ್ಧತೆ ಅತಿ ಮುಖ್ಯ ಎಂದು ಮೂಲಗಳು ಹೇಳಿವೆ.

ಆದರೆ, ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ವಾಯುಪಡೆಯ ವಕ್ತಾರ, ವಿಂಗ್ ಕಮಾಂಡರ್ ಇಂದ್ರಾನಿಲ್ ನಂದಿ ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.