ADVERTISEMENT

ಸಂಭಾವ್ಯ ತುರ್ತು ಸಂದರ್ಭ: ಗಡಿಯತ್ತ ಯುದ್ಧ ವಿಮಾನ

ಗಾಲ್ವನ್‌ ತನ್ನದೆಂದ ಚೀನಾ– ಭಾರತದ ತಿರುಗೇಟು l ಹಿಂದೆ ಸರಿಯದ ಸೇನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 20:54 IST
Last Updated 20 ಜೂನ್ 2020, 20:54 IST
ಭಾರತ ವಾಯುಸೇನೆಯ ವಿಮಾನ- ಸಾಂಕೇತಿಕ ಚಿತ್ರ
ಭಾರತ ವಾಯುಸೇನೆಯ ವಿಮಾನ- ಸಾಂಕೇತಿಕ ಚಿತ್ರ   

ನವದೆಹಲಿ/ಬೀಜಿಂಗ್‌ (ರಾಯಿಟರ್ಸ್‌, ಪಿಟಿಐ): ಸಂಭಾವ್ಯ ‘ತುರ್ತು ಸಂದರ್ಭ’ವನ್ನು ಎದುರಿಸಲು ಲಡಾಖ್‌ ಪ್ರದೇಶದ ವಾಯುನೆಲೆಗಳಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಲಾಗಿದ್ದು, ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಟಿಬೆಟ್‌ನಲ್ಲಿರುವ ವಾಯುನೆಲೆಗಳಿಂದ ಚೀನಾ ನಡೆಸಿರುವ ಚಟುವಟಿಕೆಗಳ ಮೇಲೆ ನಿಗಾ ಇಡಲು ಭಾರತೀಯ ವಾಯುಪಡೆಯೂ ‘ವಾಯು ಗಸ್ತು’ ಆರಂಭಿಸಿದೆ. ‘ಅಪಾಚೆ’ ಯುದ್ಧ ಹೆಲಿಕಾಪ್ಟರ್‌ಗಳು, ‘ಮಿಗ್‌–29’ ಯುದ್ಧ ವಿಮಾನಗಳು ಲೇಹ್‌ ವಾಯುನೆಲೆ ಯಿಂದ ಹಾರಾಟ ಹೆಚ್ಚಿಸಿರುವ ಕುರಿತು ಮಾಧ್ಯಮಗಳು ವರದಿ ಮಾಡಿವೆ.

ಹೈದರಾಬಾದ್‌ನಲ್ಲಿ ಮಾತನಾಡಿರುವ ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ, ಗಡಿ ಪ್ರದೇಶದಲ್ಲಿ ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಿರುವುದನ್ನು ದೃಢಪಡಿಸಿದ್ದಾರೆ.

ADVERTISEMENT

‘ವಾಸ್ತವ ಗಡಿ ರೇಖೆಯಲ್ಲಿ ಚೀನಾ ಈ ವರ್ಷ ಸೇನಾ ಜಮಾವಣೆಯನ್ನು ಹೆಚ್ಚಿಸಿದೆ. ಅದರಲ್ಲೂ ಮೇ ತಿಂಗಳ ಬಳಿಕ ಅಲ್ಲಿ ಚೀನಿ ಸೈನಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ನಾವು ಅಲ್ಲಿನ ಎಲ್ಲ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದು, ಅಗತ್ಯ ಕ್ರಮ ಕೈಗೊಂಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಗಾಲ್ವನ್‌ ಘಟನೆಯ ಬಳಿಕ ಭದೌರಿಯಾ ಅವರು ಲಡಾಖ್‌ಗೆ ದೌಡಾಯಿಸಿ ಎರಡು ದಿನ ಅಲ್ಲಿಯೇ ತಂಗಿದ್ದು, ವಾಯುಪಡೆಯಸಿದ್ಧತೆಯನ್ನು ಪರಿಶೀಲಿಸಿದ್ದಾರೆ.

ಗಾಲ್ವನ್‌ ತನ್ನದೆಂದ ಚೀನಾ

ಈ ಮಧ್ಯೆ ಲಡಾಖ್‌ ಪ್ರದೇಶದ ಗಾಲ್ವನ್‌ ಕಣಿವೆಯು ತನ್ನ ದೇಶದ ಭೂಭಾಗ ಎಂದು ಚೀನಾ ಹೇಳಿಕೊಂಡಿದೆ. ಚೀನಾದ ಈ ವಾದವನ್ನು ಭಾರತ ಅಷ್ಟೇ ತೀಕ್ಷ್ಣವಾಗಿ ಅಲ್ಲಗಳೆದಿದೆ. ಗಡಿಯಲ್ಲಿ ಉದ್ವಿಗ್ನ ಸ್ಥಿತಿಯನ್ನು ಶಮನ ಮಾಡಲು ಕಮಾಂಡರ್‌ಗಳಮಟ್ಟದ ಮಾತುಕತೆಗಳು ನಡೆದಿದ್ದರೂ ವಾಸ್ತವ ಗಡಿ ರೇಖೆಯ ಹಲವು ಕಡೆಗಳಲ್ಲಿ ಎರಡೂ ಸೇನೆಗಳ ಮುಖಾಮುಖಿ ಹಾಗೆಯೇ ಮುಂದುವರಿದಿದೆ.

ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್‌ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ‘ಗಾಲ್ವನ್‌ ಕಣಿವೆ ಚೀನಾದ ಭೂಭಾಗದಲ್ಲಿದೆ. ಕಳೆದ ಏಪ್ರಿಲ್‌ನಿಂದಲೂ ಭಾರತೀಯರು ಅಲ್ಲಿ ರಸ್ತೆ, ಸೇತುವೆ ನಿರ್ಮಾಣದಲ್ಲಿ ತೊಡಗಿದ್ದಾರೆ’ ಎಂದು ತಿಳಿಸಿದ್ದಾರೆ.

‘ಭಾರತೀಯ ಸೈನಿಕರೇ ವಾಸ್ತವ ಗಡಿ ರೇಖೆಯನ್ನು ದಾಟಿ ಬಂದಿದ್ದರು. ಮಾತುಕತೆಗೆ ತೆರಳಿದ್ದ ನಮ್ಮ ಸೈನಿಕರ ಮೇಲೆ ಅವರು ದೈಹಿಕವಾಗಿ ಹಲ್ಲೆ ನಡೆಸಿದರು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಆದರೆ, ಘಟನೆಯಲ್ಲಿ ಚೀನಾ ಸೈನ್ಯಕ್ಕೆ ಆಗಿರುವ ಹಾನಿಯ ಕುರಿತು ಯಾವ ವಿವರವನ್ನೂ ಅವರು ಹಂಚಿಕೊಂಡಿಲ್ಲ.

ಭಾರತದ ತಿರುಗೇಟು

‘ಗಾಲ್ವನ್‌ ಕಣಿವೆ ಮೇಲೆ ಚೀನಾದ ಸಾರ್ವಭೌಮತ್ವವನ್ನು ಎಂದಿಗೂ ಒಪ್ಪಲಾಗದು. ಗಡಿ ಉಲ್ಲಂಘನೆಯ ಎಲ್ಲಾ ಪ್ರಯತ್ನಗಳಿಗೆ ತಕ್ಕ ಉತ್ತರ ನೀಡಲಾಗುವುದು’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೀನಾಕ್ಕೆ ಪ್ರತ್ಯುತ್ತರವನ್ನು ನೀಡಿದೆ.

‘ಗಾಲ್ವನ್‌ ಕುರಿತ ಭಾರತದ ನಿಲುವು ಚಾರಿತ್ರಿಕವಾಗಿ ಸ್ಪಷ್ಟ. ಈ ಪ್ರದೇಶ ಸೇರಿದಂತೆ ಭಾರತ– ಚೀನಾ ನಡುವಿನ ಒಟ್ಟಾರೆ ಗಡಿರೇಖೆಯ ಬಗ್ಗೆ ಭಾರತೀಯ ಸೇನೆಗೆ ಸ್ಪಷ್ಟ ಮಾಹಿತಿ ಇದೆ ಮತ್ತು ಅದರ ರಕ್ಷಣೆಗೆ ಸೇನೆ ಬದ್ಧವಾಗಿದೆ’ ಎಂದು ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ.

‘ಮೇ ತಿಂಗಳ ಮಧ್ಯಭಾಗದಲ್ಲಿ ಬೇರೆ ಕೆಲವು ಭಾಗಗಳಲ್ಲಿ ಗಡಿ ಉಲ್ಲಂಘನೆಯ ಪ್ರಯತ್ನವನ್ನೂ ಚೀನಾ ನಡೆಸಿತ್ತು. ಇಂಥ ಪ್ರಯತ್ನಗಳಿಗೆ ಭಾರತವು ತಕ್ಕ ಪ್ರತ್ಯುತ್ತರವನ್ನು ನೀಡಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

‘ಮೋದಿಯಿಂದ ಚೀನಾಕ್ಕೆ ಕ್ಲೀನ್‌ ಚಿಟ್‌’

ಚೀನಾ ಜತೆಗಿನ ಗಡಿ ಸಂಘರ್ಷದ ಕುರಿತು ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನೀಡಿದ ಹೇಳಿಕೆಯನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸಿದ್ದು, ಅದರ ಬೆನ್ನಹಿಂದೆಯೇ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿಯಿಂದಲೂ (ಪಿಎಂಒ) ಸ್ಪಷ್ಟನೆ ಬಿಡುಗಡೆ ಮಾಡಲಾಗಿದೆ.

‘ಭಾರತದ ಯಾವುದೇ ಭೂಭಾಗವು ಚೀನಾದ ಹಿಡಿತದಲ್ಲಿಲ್ಲ’ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ಕಚೇರಿ (ಪಿಎಂಒ), ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನೀಡಿದ ಹೇಳಿಕೆಯು ನಮ್ಮ ಸೈನಿಕರು ಮೆರೆದ ಶೌರ್ಯದ ನಂತರದ ಬೆಳವಣಿಗೆಗಳ ಕುರಿತಾದದ್ದು’ ಎಂದು ಸ್ಪಷ್ಟನೆ ನೀಡಿದೆ.

ಶುಕ್ರವಾರ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಅವರು, ‘ಭಾರತದ ಭೂಪ್ರದೇಶವನ್ನು ಯಾರೂ ಅತಿಕ್ರಮಿಸಿಲ್ಲ ಅಥವಾ ನಮ್ಮ ಗಸ್ತು ಠಾಣೆಯನ್ನು ಯಾರೂ ವಶಕ್ಕೆ ಪಡೆದಿಲ್ಲ’ ಎಂದು ಹೇಳಿದ್ದರು.

ಪ್ರಧಾನಿಯ ಈ ಹೇಳಿಕೆಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ‘ಮೋದಿ ಅವರು ಚೀನಾಕ್ಕೆ ಶರಣಾಗಿದ್ದಾರೆ. ಹೀಗಾಗಿ ಆ ದೇಶಕ್ಕೆ ‘ಕ್ಲೀನ್‌ ಚಿಟ್‌’ ನೀಡಿದ್ದಾರೆ’ ಎಂದು ಕೆಣಕಿತ್ತು. ‘ವಾಸ್ತವ ಗಡಿ ರೇಖೆಯನ್ನು ದಾಟಿಕೊಂಡು ಯಾರೂ ದೇಶದ ಭೂಪ್ರದೇಶವನ್ನು ಅತಿಕ್ರಮಿಸಿಲ್ಲ ಎಂದಾದರೆ 20 ಸೈನಿಕರು ಹುತಾತ್ಮರಾಗಲು ಕಾರಣವೇನು’ ಎಂದೂ ಪ್ರಶ್ನಿಸಿತ್ತು.

ಚೀನಾ ಸೈನಿಕರು ಭಾರತದ ಗಡಿಯೊಳಗೆ ನುಸುಳಿದ್ದನ್ನು ದೃಢೀಕರಿಸಿರುವ ಪಿಎಂಒ, ‘ಅತಿಕ್ರಮಣ ಮಾಡಿದವರನ್ನು ಭಾರತೀಯ ಸೈನಿಕರು ಹಿಮ್ಮೆಟ್ಟಿಸಿದ್ದು, ಸದ್ಯ ದೇಶದ ಯಾವುದೇ ಭೂಭಾಗವು ಚೀನಾದ ಹಿಡಿತದಲ್ಲಿಲ್ಲ’ ಎಂದು ಮಾಹಿತಿ ನೀಡಿದೆ. ‘ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನೀಡಿರುವ ಹೇಳಿಕೆಯನ್ನು ತಿರುಚಲಾಗಿದ್ದು, ತಪ್ಪಾಗಿ ಅರ್ಥೈಸಲಾಗಿದೆ’ ಎಂದೂ ಹೇಳಿಕೆಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.