ನವದೆಹಲಿ: ದೇಶದಲ್ಲಿ ಕೋವಿಡ್–19 ಪ್ರಕರಣ ಏರಿಕೆ ದರವು ಶನಿವಾರ ಅತ್ಯಂತ ಕನಿಷ್ಠ ಮಟ್ಟವನ್ನು ದಾಖಲಿಸಿದೆ. ಶನಿವಾರ ಬೆಳಿಗ್ಗೆ 8ರ ವರೆಗಿನ 24 ಗಂಟೆಗಳ ಅವಧಿಯಲ್ಲಿ 1,429 ಪ್ರಕರಣಗಳು ವರದಿಯಾಗಿದ್ದು, ಶೇ 6ರಷ್ಟು ಏರಿಕೆ ಕಂಡುಬಂದಿದೆ. ಇದು ಈವರೆಗಿನ ಕನಿಷ್ಠ ಪ್ರಮಾಣ.
ಕೇಂದ್ರ ಸಚಿವ ಹರ್ಷವರ್ಧನ್ ನೇತೃತ್ವದಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸಭೆಗೆ ರಾಜ್ಯವಾರು ಕೋವಿಡ್ ಸಂಬಂಧಿ ಮಾಹಿತಿ ನೀಡಲಾಯಿತು.ದೇಶದಲ್ಲಿ ಸಾವಿನ ದರ ಶೇ 3.1ರಷ್ಟಿದ್ದು, ಗುಣಮುಖ ಆಗುತ್ತಿರುವ ದರ ಶೇ 20ಕ್ಕಿಂತಲೂ ಹೆಚ್ಚಿದೆ. ಸೋಂಕಿನಿಂತ ಈವರೆಗೆ 5,210 ಜನ ಗುಣಮುಖರಾಗಿದ್ದಾರೆ.
‘ಈ ದತ್ತಾಂಶಗಳನ್ನು ಇತರ ಹಲವು ದೇಶಗಳ ಜತೆ ಹೋಲಿಸಿ ನೋಡಿದರೆ ಭಾರತ ಉತ್ತಮ ಸ್ಥಿತಿಯಲ್ಲಿದೆ. ದೇಶದಾದ್ಯಂತ ಕಟ್ಟುನಿಟ್ಟಾಗಿ ಜಾರಿ ಮಾಡಲಾದ ಲಾಕ್‌ಡೌನ್, ಕ್ಲಸ್ಟರ್ ನಿರ್ವಹಣೆ ಹಾಗೂ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಅನುಸರಿಸಿದ ಕ್ರಮಗಳು ಇದಕ್ಕೆ ಮುಖ್ಯ ಕಾರಣ’ ಎಂದು ಸಭೆಗೆ ತಿಳಿಸಲಾಯಿತು.
ಸೋಂಕು ತಪಾಸಣೆ ಕಾರ್ಯತಂತ್ರ, ಕಿಟ್‌ಗಳ ಲಭ್ಯತೆ ಬಗ್ಗೆ ಸಭೆ ಪರಾಮರ್ಶೆ ನಡೆಸಿತು. ಆದರೆ, ಚೀನಾದದೋಷಪೂರಿತ ಆ್ಯಂಟಿಬಾಡಿ ಕಿಟ್‌ಗಳ ಬಳಕೆ ಬಗ್ಗೆ ಸ್ಪಷ್ಟ ನಿರ್ದೇಶನ ಹೊರಬರಲಿಲ್ಲ. ಈ ಕಿಟ್‌ಗಳ ಬಳಕೆಯನ್ನು ಸದ್ಯಕ್ಕೆ ನಿಲ್ಲಿಸುವಂತೆ ಐಸಿಎಂಆರ್ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು.
ವಿವಿಧ ರಾಜ್ಯಗಳಲ್ಲಿ ಕೋವಿಡ್ ಆಸ್ಪತ್ರೆಗಳ ನಿರ್ವಹಣೆ, ಪ್ರತ್ಯೇಕವಾಸಕ್ಕೆ ಅಗತ್ಯ ಹಾಸಿಗೆಗಳು, ಪಿಪಿಇ ಕಿಟ್, ಎನ್95 ಮಾಸ್ಕ್, ಔಷಧ, ವೆಂಟಿಲೇಟರ್, ಆಮ್ಲಜನಕ ಸಿಲಿಂಡರ್ ಮೊದಲಾದ ಪರಿಕರಗಳ ಲಭ್ಯತೆ ಬಗ್ಗೆ ಸಭೆ ಮಾಹಿತಿ ಪಡೆದುಕೊಂಡಿತು.
‘ದೇಶದಲ್ಲಿ 104 ಕಂಪನಿ ಗಳು ಪಿಪಿಇ ಕಿಟ್‌ಗಳನ್ನು ಹಾಗೂ ಮೂರು ಕಂಪನಿಗಳು ಮಾಸ್ಕ್‌ಗಳನ್ನು ತಯಾರಿಸಲು ಆರಂಭಿಸಿವೆ. ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್ ಹಾಗೂ ಎನ್95 ಮಾಸ್ಕ್ ತಯಾರಿಸಲಾಗುತ್ತಿದೆ. ವೆಂಟಿಲೇಟರ್‌ಗಳ ತಯಾರಿಯೂ ಆರಂಭವಾಗಿದ್ದು, ದೇಶದ ವಿವಿಧ ಕಂಪನಿಗಳಿಗೆ 59 ಸಾವಿರ ಉಪಕರಣಗಳಿಗೆ ಬೇಡಿಕೆ ಬಂದಿದೆ’ಎಂದು ಮಾಹಿತಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.